ಹಗರಿಬೊಮ್ಮನಹಳ್ಳಿ: ನರೇಗಾ ಬದಲಾಗಿ ಕೇಂದ್ರ ಸರ್ಕಾರದ ಜಾರಿಗೊಳಿಸಲುದ್ದೇಶಿಸಲಾಗಿರುವ ವಿಬಿಜಿ ರಾಮ್‌ಜಿ ಯೋಜನೆ ಜಾರಿ ವಿರೋಧಿಸಿ ಇಟ್ಟಿಗಿ ಬ್ಲಾಕ್ ಕಾಂಗ್ರೆಸ್ ಮತ್ತು ಹಂಪಸಾಗರ ಜಿಪಂ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸೋಮವಾರ ತಾಲೂಕಿನ ಬನ್ನಿಕಲ್ಲು ಗ್ರಾಮದಿಂದ ಹಂಪಸಾಗರ ನಾಡ ಕಚೇರಿಯವರೆಗೂ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಮಾತನಾಡಿ, ದುಡಿಯುವ ಜನರ ಹಕ್ಕು ಪರಿಗಣಿಸಿ ಮನಮೋಹನ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ ಜಾರಿಗೆ ತಂದ ಮನರೇಗಾ ಯೋಜನೆ ಐತಿಹಾಸಿಕ ಜನಪರ ಯೋಜನೆಯಾಗಿತ್ತು. ಕೇಂದ್ರ ಸರ್ಕಾರವೇ ಯೋಜನೆಯ ಕೂಲಿ ಪಾವತಿಸುತ್ತಿತ್ತು. ಈಗ ಈ ಯೋಜನೆಯನ್ನು ಅಪಭ್ರಂಶಗೊಳಿಸಿರುವ ಮೋದಿ ಸರಕಾರ ಕೂಲಿಯ ಪ್ರತಿಶತ ೪೦%ರಷ್ಟು ರಾಜ್ಯ ಸರಕಾರ ಪಾವತಿಸುವಂತೆ ಹುನ್ನಾರ ನಡೆಸಿದೆ ಎಂದು ದೂರಿದರು.ಅಪಭ್ರಂಶಗೊಂಡಿರುವ ಯೋಜನೆಯಿಂದಾಗಿ ಬಡವರನ್ನು ಬಡವರನ್ನಾಗಿಯೇ ಉಳಿಸುವ, ಬಡವರು ಹಾಗೂ ಕೂಲಿ ಕಾರ್ಮಿಕರು ಕೂಲಿ ಅರಸಿ ಮತ್ತೆ ಗುಳೆ ಹೋಗುವುದು ಅನಿವಾರ್ಯವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಪಡೆಯುವ ಹಕ್ಕನ್ನೂ ಮೊಟಕುಗೊಳಿಸುವ ದುಷ್ಟ ಹುನ್ನಾರ ಜಾರಿಯ ಹಿಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನರೇಗಾ ಯೋಜನೆ ಮುಂದುವರೆಸಬೇಕು. ಹಡಗಲಿವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ೬ ಜಿಪಂ ಕ್ಷೇತ್ರಗಳಲ್ಲಿ ಹಂತ ಹಂತವಾಗಿ ಪಾದಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿ ಕೂಲಿ ಕಾರ್ಮಿಕರನ್ನು ಜಾಗೃತಗೊಳಿಸುತ್ತೇವೆ ಎಂದರು.ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶಿವಯೋಗಿ, ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಟಿ.ಮಹೇಶ, ಉಪಾಧ್ಯಕ್ಷ ಹನುಮಜ್ಜ, ಹೂವಿನಹಡಗಲಿ ಬ್ಲಾಕ್ ಅಧ್ಯಕ್ಷ ಅಟವಾಳಿಗಿ ಕೋಟ್ರೇಶ, ಇಟ್ಟಿಗಿಯ ಕಾಲ್ವಿ ಹನುಮಂತಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಹಾಲೇಶ, ಜಿ.ಪಂ.ಮಾಜಿ ಸದಸ್ಯ ಜಿ.ವಸಂತ, ಸೋಗಿ ಪಿ.ವಿಜಯಕುಮಾರ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್. ಶಾಂತನಗೌಡ, ಪ್ರಮುಖರಾದ ಚಂದ್ರನಾಯ್ಕ್, ಸಕ್ರಳ್ಳಿ ಮಲ್ಲಿಕಾರ್ಜುನಗೌಡ, ದೊಡ್ಡಬಸಪ್ಪ, ಕೆ.ಬಸಮ್ಮ, ಪ್ರೇಮಕ್ಕ, ನಸ್ರೀನ್ ಹಾಗೂ ಲಲಿತಮ್ಮ ಮತ್ತಿತರರಿದ್ದರು.