ಸಾರಾಂಶ
ಗದಗ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿದ ವಕೀಲ ಕಿಶೋರ್ ರಾಕೇಶ್ ಅವರ ಅಸಭ್ಯ ವರ್ತನೆಯನ್ನು ಖಂಡಿಸಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ವಕೀಲರ ಸಂಘ ಮತ್ತು ವಿವಿಧ ದಲಿತಪರ ಸಂಘಟನೆಗಳು ನಗರದಾದ್ಯಂತ ಬೃಹತ್ ಪ್ರತಿಭಟನೆ ನಡೆಸಿದವು. ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಈ ಅಪಮಾನದ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದರು.ಜಿಲ್ಲಾ ವಕೀಲರ ಸಂಘವು ನ್ಯಾಯಾಲಯ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ, ನ್ಯಾಯ ವ್ಯವಸ್ಥೆಗೆ ಅಸಡ್ಡೆ ತೋರಿದ ವಕೀಲ ಕಿಶೋರ್ ರಾಕೇಶ್ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಬೇಕು ಮತ್ತು ಅವರನ್ನು ತಕ್ಷಣ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ದಲಿತ ಸಂಘಟನೆಗಳ ಆಕ್ರೋಶ: ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ನಗರದ ಹೃದಯ ಭಾಗವಾದ ಮಹಾತ್ಮ ಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ರಸ್ತೆಯನ್ನು ಬಂದ್ ಮಾಡಿದರು. ನ್ಯಾಯಾಂಗ ಸಂಸ್ಥೆಯ ಮೇಲಿನ ದಾಳಿಯನ್ನು ಅವರು ತೀವ್ರವಾಗಿ ಖಂಡಿಸಿದರು.ಪ್ರತಿಭಟನಾಕಾರರ ಆಕ್ರೋಶದಿಂದಾಗಿ ಮಹಾತ್ಮ ಗಾಂಧಿ ವೃತ್ತದ ಸುತ್ತ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಪ್ರತಿಭಟನೆಯಲ್ಲಿ ಅನೇಕ ದಲಿತ ಮುಖಂಡರು ಇದ್ದರು.
ನ್ಯಾಯಾಲಯಕ್ಕೆ ಅಪಮಾನ ಮಾಡಿದ ವ್ಯಕ್ತಿ ಬಂಧನಕ್ಕೆ ಒತ್ತಾಯಗದಗ: ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ನ್ಯಾಯಾಲಯಕ್ಕೆ ಅವಮಾನ ಮಾಡಿದ ವಕೀಲನನ್ನು ಕೂಡಲೇ ಬಂಧಿಸಿ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ ದಲಿತ ಯುವ ಸೇನಾ ಸಮಿತಿ ವತಿಯಿಂದ ಡಿಸಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.ಸಂವಿಧಾನ ಜಾರಿಗೆ ಬಂದು 75 ವರ್ಷದ ನಂತರವೂ ಜಾತೀಯತೆ ಹಾಗೂ ಅಸಮಾನತೆಯು ಕೋಮುವಾದಿಗಳ ಮನಸ್ಸಿನಲ್ಲಿ ಇನ್ನೂ ಬೇರೂರಿದೆ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಹಾಕಿ ಪರಸ್ಪರ ದ್ವೇಷ ಮತ್ತು ಅಸಹನೆಯನ್ನು ಹುಟ್ಟುಹಾಕಿರುವ ವಿಕೃತ ಮನಸ್ಸುಗಳು ದೇಶದಲ್ಲಿ ವಿಜೃಂಭಿಸುತ್ತಿವೆ.ರಾಕೇಶ ಕಿಶೋರ ನಂತರ ಮನುವಾದಿ ಮನಸ್ಸುಗಳು ಸಮಾಜದಲ್ಲಿ ಹುಟ್ಟಿಕೊಂಡು ಕೆಲವು ಪುಂಡರ ಜತೆ ಸೇರಿ ವಕೀಲನ ದುಷ್ಕೃತ್ಯವನ್ನು ಸಂಭ್ರಮಿಸುವುದನ್ನು ಕಾಣುತ್ತಿದ್ದೇವೆ. ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಯುವಸೇನಾ ಸಮಿತಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ವಿಜಯ ಎಸ್. ಮುಳಗುಂದ, ವೆಂಕಟೇಶ ಬಳ್ಳಾರಿ, ಮೋಹನ ಭಜಂತ್ರಿ, ಸಣ್ಣವೆಂಕಟೇಶ ಬಿಂಕದಕಟ್ಟಿ, ಸಂಜೀವ ಕೊರವರ, ದ್ಯಾಮಣ್ಣ ಬಿಜಾಪೂರ, ಬಸವರಾಜ ಸತ್ಯಮ್ಮನವರ, ಮಲ್ಲಪ್ಪ ಸಣ್ಣಕ್ಕಿ, ಲಕ್ಷ್ಮಣ ಸಣ್ಣಕ್ಕಿ, ವಿನಾಯಕ ಹೊಸಳ್ಳಿ, ನಾಗರಾಜ ಸಾಸ್ವಹಳ್ಳಿ, ತಾನುಜ ದೊಡ್ಡಮನಿ, ಗಂಗಪ್ಪ ಹೆಬ್ಬಳ್ಳಿ, ಲಿಂಗರಾಜ ದೊಡ್ಡಮನಿ, ಕಿರಣ ಮಿಶ್ರಿಕೋಟಿ, ವಿಜಯ ಚಲವಾದಿ ದಲಿತ ಮುಖಂಡರು, ಅಶೋಕ ತಾಳದ ಇತರರು ಇದ್ದರು.