ನ್ಯಾಯಮೂರ್ತಿಗಳ ಮೇಲೆ ಶೂ ಎಸೆತಕ್ಕೆ ಯತ್ನ: ಕಲಾಪ ಬಹಿಷ್ಕರಿಸಿದ ವಕೀಲರ

| Published : Oct 09 2025, 02:00 AM IST

ನ್ಯಾಯಮೂರ್ತಿಗಳ ಮೇಲೆ ಶೂ ಎಸೆತಕ್ಕೆ ಯತ್ನ: ಕಲಾಪ ಬಹಿಷ್ಕರಿಸಿದ ವಕೀಲರ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ಘಟನೆ ಕಪ್ಪು ಚುಕ್ಕೆಯಾಗಿದೆ. ದೇಶದಲ್ಲಿ ಪ್ರಥಮ ಭಾರಿಗೆ ಸರ್ವೋಚ್ಚ ನ್ಯಾಯಾಲಯದ ತೆರೆದ ನ್ಯಾಯಾಲಯದಲ್ಲಿ ಹಿರಿಯ ವಕೀಲ ಶೂ ಎಸೆದ ಕ್ರಮ ಖಂಡನೀಯ.

ಕನ್ನಡಪ್ರಭ ವಾರ್ತೆ ಮದ್ದೂರು

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿರುವುದನ್ನು ಖಂಡಿಸಿ ಪಟ್ಟಣದ ವಕೀಲರು ಬುಧವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ವಕೀಲರ ದಿಢೀರ್ ಪ್ರತಿಭಟನೆಯಿಂದಾಗಿ ನ್ಯಾಯಾಲಯದ ಮೊಕದ್ದಮ್ಮೆಗಳ ವಿಚಾರಣೆಗೆ ಹಾಜರಾಗಿದ್ದ ಕಕ್ಷಿದಾರರು ತೀವ್ರ ತೊಂದರೆಗೊಳಗಾದರು.

ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ವಕೀಲರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ನಂತರ ನ್ಯಾಯಾಲಯದ ಕಲಾಪ ಬಹಿಷ್ಕರಿಸಲು ತೀರ್ಮಾನ ಕೈಗೊಂಡರು.

ಈ ವೇಳೆ ಸಭೆಯಲ್ಲಿ ಮಾತನಾಡಿದ ಹಿರಿಯ ವಕೀಲ ಬಿ.ರಾಮಕೃಷ್ಣೇಗೌಡ, ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ಘಟನೆ ಕಪ್ಪು ಚುಕ್ಕೆಯಾಗಿದೆ. ದೇಶದಲ್ಲಿ ಪ್ರಥಮ ಭಾರಿಗೆ ಸರ್ವೋಚ್ಚ ನ್ಯಾಯಾಲಯದ ತೆರೆದ ನ್ಯಾಯಾಲಯದಲ್ಲಿ ಹಿರಿಯ ವಕೀಲ ಶೂ ಎಸೆದ ಕ್ರಮ ಖಂಡನೀಯ ಎಂದರು.

ಹಿಂದೂ ಸಂಸ್ಕೃತಿಗೆ ದಕ್ಕೆ ತರಬಹುದಾದ ಈ ಘಟನೆ ವಿಶೇಷವಾಗಿ ವಕೀಲರ ಸಮುದಾಯಕ್ಕೆ ಅಗೌರವ ಉಂಟು ಮಾಡುವ ಕೃತ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ ವಕೀಲರಾದ ಎಚ್.ಮಾದೇಗೌಡ, ಎಚ್‌.ವಿ.ಬಾಲರಾಜು, ಜಿ.ಮಹದೇವಯ್ಯ, ಯು.ವಿ.ಗಿರೀಶ್, ಎಂ.ಎನ್.ಚಂದ್ರಶೇಖರ್, ಎಂ.ಎಂ.ಪ್ರಶಾಂತ್, ಜಿ.ಎನ್.ಸತ್ಯ, ಕೆ.ದೇವರಾಜು, ಎಸ್.ಎಂ.ಶೋಭಾ, ಎನ್.ಕೆ.ಜಗದೀಶ್, ಕೃಷ್ಣಯ್ಯ, ಬೋರಯ್ಯ, ಎಂ.ಟಿ.ಶ್ರೀನಿವಾಸ, ಸುನಿಲ್ ಕುಮಾರ್, ಯೋಗಾನಂದ ಹಲವರು ಇದ್ದರು.

ಶೂ ಎಸೆತಕ್ಕೆ ಖಂಡನೆ ಕಲಾಪದಿಂದ ಹೊರಗೊಳಿದ ವಕೀಲರು

ಶ್ರೀರಂಗಪಟ್ಟಣ:

ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಹಿರಿಯ ವಕೀಲ ಶೂ ಎಸೆದು ಅವಮಾನ ಮಾಡಿರುವುದನ್ನು ಖಂಡಿಸಿ ಪಟ್ಟಣದ ವಕೀಲರು ಕಲಾಪದಿಂದ ಹೊರಗುಳಿದರು.

ಪಟ್ಟಣದ ವಕೀಲರ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಎನ್.ಮರೀಗೌಡ ನೇತೃತ್ವದಲ್ಲಿ ಕಚೇರಿಯಲ್ಲಿ ಸಭೆ ಕರೆದು ಸದಸ್ಯರು ಚರ್ಚೆ ನಡೆಸಿ ಕಲಾಪದಿಂದ ದೂರ ಉಳಿಯುವಂತೆ ತೀರ್ಮಾನಿಸಿದರು.

ನಂತರ ನ್ಯಾಯಾಲಯದ ಹೊರಗೆ ವಕೀಲರು ಸೇರಿ ನ್ಯಾಯಾಂಗದ ಸಾರ್ವಭೌಮತೆ, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ದೇಶದ ಸಾರ್ವಭೌಮತೆಗೆ ಧಕ್ಕೆ ತಂದು ನ್ಯಾಯಾಧೀಶರ ಮೇಲೆ ಹಲ್ಲೆ ಮಾಡಿದ ಇದೊಂದು ದೇಶದ್ರೋಹದ ಕೃತ್ಯವಾಗಿದೆ. ಆರೋಪಿ ವಕೀಲ ರಾಕೇಶ್ ಕಿಶೋರ್ ಆತನ ಇಂದಿರುವ ಪಿತೂರಿದಾರರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡುವುದಾಗಿ ಅಧ್ಯಕ್ಷ ಎನ್.ಮರೀಗೌಡ ತಿಳಿಸಿದರು.

ಈ ವೇಳೆ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ವಕೀಲರುಗಳು, ಸದಸ್ಯರು ಹಾಜರಿದ್ದರು.