ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟದ ಚಂದ್ರೇಶ್ ತಾಲೂಕಿನಲ್ಲಿ ತಮ್ಮ ಸೇವಾ ಟ್ರಸ್ಟ್ ಮೂಲಕ ಜನ ಸಾಮಾನ್ಯರಿಗೆ ತಮ್ಮದೇ ಆದ ಸೇವೆ ನೀಡುತ್ತಿದ್ದು, ಜನ ಮನ್ನಣೆಗಳಿಸಿದ್ದಾರೆ. ಆದರೆ ಶಾಸಕ ಶಾಸಕ ಎಂ.ಟಿ.ಕೃಷ್ಣಪ್ಪ ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಚಂದ್ರೇಶ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟದ ಚಂದ್ರೇಶ್ ತಾಲೂಕಿನಲ್ಲಿ ತಮ್ಮ ಸೇವಾ ಟ್ರಸ್ಟ್ ಮೂಲಕ ಜನ ಸಾಮಾನ್ಯರಿಗೆ ತಮ್ಮದೇ ಆದ ಸೇವೆ ನೀಡುತ್ತಿದ್ದು, ಜನ ಮನ್ನಣೆಗಳಿಸಿದ್ದಾರೆ. ಆದರೆ ಶಾಸಕ ಶಾಸಕ ಎಂ.ಟಿ.ಕೃಷ್ಣಪ್ಪ ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಚಂದ್ರೇಶ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಸೊರವನಹಳ್ಳಿಯ ಆದಿಶಕ್ತಿ ಕಾಳಘಟ್ಟಮ್ಮ ದೇವಾಲಯದ ಆವರಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ಕೋಡಿನಾಗಸಂದ್ರದ ರಾಘವೇಂದ್ರ, ಇತ್ತೀಚೆಗೆ ಉದ್ಘಾಟನೆಗೊಂಡ ಆದಿಶಕ್ತಿ ಕಾಳಘಟ್ಟಮ್ಮ ದೇವಾಲಯದ ಧಾರ್ಮಿಕ ಸಭೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರನ್ನು ಕರೆಸುವಲ್ಲಿ ದೊಡ್ಡಾಘಟ್ಟ ಚಂದ್ರೇಶ್ ರವರ ಪಾತ್ರ ಹಿರಿದಾಗಿದೆ. ತಮ್ಮ ನಾಯಕರನ್ನು ಕರೆಸಿದ್ದ ಬಗ್ಗೆ ಅಭಿಮಾನದಿಂದ ದೊಡ್ಡಾಘಟ್ಟ ಚಂದ್ರೇಶ್ ರವರನ್ನು ಅಭಿಮಾನಿಗಳು ಸಮಾರಂಭದಲ್ಲಿ ಹೆಚ್ಚಾಗಿ ಗೌರವಿಸಿದ್ದರು. ಇದರಿಂದ ಅಸಮಾಧಾನ ಗೊಂಡಿರುವ ಶಾಸಕ ಎಂ.ಟಿ.ಕೃಷ್ಣಪ್ಪನವರು ಟಿ.ಬಿ.ಕ್ರಾಸ್ ನಲ್ಲಿ ಮುಂಬರುವ ದಿನಗಳಲ್ಲಿ ಉದ್ಘಾಟನೆಗೊಳ್ಳಲಿರುವ ದೇವಾಲಯದ ಉದ್ಘಾಟನೆಗೆ ಕುಮಾರಸ್ವಾಮಿಯವರನ್ನು ನಾನು ಕರೆಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡ ಶಾಸಕರು ದೇವಾಲಯದ ಆಹ್ವಾನ ಪತ್ರಿಕೆಯನ್ನು ಬದಿಗೊತ್ತಿ, ಅವರೇ ಪ್ರತ್ಯೇಕ ಕರಪತ್ರವನ್ನು ಹೊರಡಿಸಿದ್ದಾರೆ. ಅದರಲ್ಲಿ ದೊಡ್ಡಾಘಟ್ಟ ಚಂದ್ರೇಶ್ ರವರ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟು ತಾಲೂಕಿನಾದ್ಯಂತ ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆಂದು ರಾಘವೇಂದ್ರ ಆರೋಪಿಸಿದರು.

ಹಾಲಿ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರು ಶಾಸಕರಾಗಲು ದೊಡ್ಡಾಘಟ್ಟ ಚಂದ್ರೇಶ್ ಕಾಯಾ, ವಾಚಾ, ಮನಸಾ ಹಗಲಿರುಳು ದುಡಿದಿದ್ದಾರೆ. ಅವರ ಗೆಲುವಿನಲ್ಲಿ ಚಂದ್ರೇಶ್ ರವರ ಪಾತ್ರವೂ ಪ್ರಮುಖವಾಗಿದೆ. ಹಲವಾರು ಬಾರಿ ಶಾಸಕ ಕೃಷ್ಣಪ್ಪನವರು ತಮ್ಮದು ಕೊನೇ ಚುನಾವಣೆ ಎಂದು ಹೇಳಿದ್ದರು. ಆ ವೇಳೆ ಕೃಷ್ಣಪ್ಪನವರೇ ದೊಡ್ಡಾಘಟ್ಟ ಚಂದ್ರೇಶ್ ರವರನ್ನು ಕಾರ್ಯಕರ್ತರ ಬಳಿ ಮುಂದಿನ ನಾಯಕ ಎಂದು ಪರಿಚಯಿಸಿದ್ದರು. ಈಗ ಅವರನ್ನು ಹಳಿಯುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ಸಹಾಯ ಪಡೆದವರನ್ನು ತುಳಿಯಲು ಪ್ರಯತ್ನಿಸುವುದು ಸರಿಯಲ್ಲ ಎಂದರು.

ತಾಲೂಕಿಗೆ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿಯವರ ಕುಟುಂಬದ ಸದಸ್ಯರು ಯಾರೇ ಬಂದರೂ ಸಹ ಜನರು ಸ್ವಾಗತಿಸುತ್ತಾರೆ, ಗೌರವಿಸುತ್ತಾರೆ. ತಾಲೂಕಿನ ಎಲ್ಲಾ ದೇವಾಲಯಗಳ ಉದ್ಘಾಟನೆಗೆ ಈರ್ವರೂ ಬಂದರೂ ನಾವು ಸ್ವಾಗತಿಸುತ್ತೇವೆ ಎಂದು ಅವರು ತಿಳಿಸಿದರು. ಈ ವೇಳೆ ಮುಖಂಡರಾದ ಸೊರವನಹಳ್ಳಿ ರವಿಕುಮಾರ್, ಪುನಿತ್, ದರ್ಶನ್, ಯತೀಶ್, ನಿಂಗೇಶ್, ರವೀಶ್, ಚೇತನ್, ಯೋಗೀಶ್, ಶಿವರಾಮು, ಮಂಜುನಾಥ್, ಸುದರ್ಶನ್, ಉಮೇಶ್, ಜಗದೀಶ್, ಹೇಮಂತ್, ಅಜ್ಜೇಗೌಡ, ಗೌರೀಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.