ಸಾರಾಂಶ
ಹಿಂದೂ ದೇವಾಲಯವಾದ ಶ್ರೀಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆ, ಭಕ್ತರ ನಂಬಿಕೆ, ವಿಶ್ವಾಸವನ್ನು ಯಾರೋ ಮೂರು ಜನ ಕಿಡಿಗೇಡಿಗಳ ಮಾತನ್ನು ಕೇಳಿ ಕಾಂಗ್ರೆಸ್ ಸರ್ಕಾರ ಹಾಳು ಮಾಡುತ್ತಿದೆ. ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಹಿಂದೂಗಳ ನಂಬಿಕೆ ಮತ್ತು ಭಕ್ತಿಗೆ ಹೆಸರುವಾಸಿಯಾದ ಶ್ರೀಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಹಿಂದೂ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದರು.ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಹಿಂದೂ ಕಾರ್ಯಕರ್ತರು ರರಕ್ತದಲ್ಲಿ ಸಹಿ ಹಾಕಿದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಸಹಾಯಕರಿಗೆ ಸಲ್ಲಿಸಿದರು.
ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕನೊಬ್ಬ ನೀಡಿದ ಹೇಳಿಕೆಯನ್ನಾಧರಿಸಿ ಎಸ್‌ಐಟಿ ತನಿಖೆ ನಡೆಯುತ್ತಿದೆ. ಅದರಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ. ಆತ ತೋರಿಸಿದ ೧೩ ಜಾಗವನ್ನು ಅಗೆದರೂ ಒಂದು ಜಾಗದಲ್ಲಿ ಬಿಟ್ಟು ಮತ್ತೆಲ್ಲೂ ಅಸ್ಥಿ ದೊರಕಿಲ್ಲ. ಹಿಂದೂ ದೇವಾಲಯವಾದ ಶ್ರೀಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆ, ಭಕ್ತರ ನಂಬಿಕೆ, ವಿಶ್ವಾಸವನ್ನು ಯಾರೋ ಮೂರು ಜನ ಕಿಡಿಗೇಡಿಗಳ ಮಾತನ್ನು ಕೇಳಿ ಕಾಂಗ್ರೆಸ್ ಸರ್ಕಾರ ಹಾಳು ಮಾಡುತ್ತಿದೆ. ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.ಧರ್ಮಸ್ಥಳ ಕ್ಷೇತ್ರಕ್ಕೆ ೮೦೦ ವರ್ಷಗಳ ಇತಿಹಾಸವಿದೆ. ಕೇರಳ ರಾಜ್ಯದ ಕಮ್ಯುನಿಸ್ಟ್ ಪಕ್ಷದ ಕೈವಾಡವೂ ಇದೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಕೇರಳದ ಮುಸ್ಲಿಂ ಲೀಗ್ ಅಲ್‌ಜೇರ ಪತ್ರಿಕೆ ಕೂಡ ಅಪಪ್ರಚಾರ ಮಾಡುತ್ತಿದೆ. ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ತಕ್ಷಣವೇ ಮಧ್ಯಪ್ರವೇಶಿಸಿ ಎನ್‌ಐಎ ತನಿಖೆಗೆ ಒಳಪಡಿಸಬೇಕು. ಶ್ರೀಧರ್ಮಸ್ಥಳ ಕ್ಷೇತ್ರದ ನಂಬಿಕೆಯನ್ನು ಉಳಿಸಬೇಕು. ಕ್ಷೇತ್ರದ ವಿರುದ್ಧ ಕುಚೋದ್ಯ ಮಾಡುತ್ತಿರುವವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಈ ವೇಳೆ ಶಿವಕುಮಾರ ಆರಾಧ್ಯ, ಕೃಷ್ಣ, ವರದರಾಜು, ಪ್ರಸನ್ನಕುಮಾರ್, ಶಂಕರಾಚಾರ್ಯ, ನಿರಂಜನ್, ಶಿವಣ್ಣ, ಸಚಿನ್, ಮಹಂತಪ್ಪ, ಶಿವಲಿಂಗು, ಮದರಾಜಅರಸ್ ಇತರರಿದ್ದರು.