ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ಯತ್ನ:ಹೆಡ್ ಕಾನ್‌ಸ್ಟೇಬಲ್‌ ಅಮಾನತು

| Published : Aug 29 2025, 02:00 AM IST

ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ಯತ್ನ:ಹೆಡ್ ಕಾನ್‌ಸ್ಟೇಬಲ್‌ ಅಮಾನತು
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ಸಂಬಂಧಿ ನಡೆಸುತ್ತಿದ್ದ ಮಾಂಸದ ಹೋಟೆಲ್‌ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮದ್ಯ ಮಾರಾಟಕ್ಕೆ ಆಕ್ಷೇಪಿಸಿದ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆಗೆ ಯತ್ನಿಸಿ ಪುಂಡಾಟಿಕೆ ನಡೆಸಿದ ಆರೋಪದ ಮೇರೆಗೆ ಹೆಡ್ ಕಾನ್‌ಸ್ಟೇಬಲ್‌ವೊಬ್ಬರ ತಲೆದಂಡವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಸಂಬಂಧಿ ನಡೆಸುತ್ತಿದ್ದ ಮಾಂಸದ ಹೋಟೆಲ್‌ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮದ್ಯ ಮಾರಾಟಕ್ಕೆ ಆಕ್ಷೇಪಿಸಿದ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆಗೆ ಯತ್ನಿಸಿ ಪುಂಡಾಟಿಕೆ ನಡೆಸಿದ ಆರೋಪದ ಮೇರೆಗೆ ಹೆಡ್ ಕಾನ್‌ಸ್ಟೇಬಲ್‌ವೊಬ್ಬರ ತಲೆದಂಡವಾಗಿದೆ.

ಚಾಮರಾಜಪೇಟೆ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್‌ ಮಧುಸೂದನ್‌ ಅಮಾನತುಗೊಂಡಿದ್ದು, ಕಳೆದ ಭಾನುವಾರ ಮಾಗಡಿ ರಸ್ತೆಯ ಟೋಲ್‌ಗೇಟ್ ಬಳಿ ಕೆ.ಪಿ. ಅಗ್ರಹಾರ ಠಾಣೆ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರ ಜತೆ ಆತ ಉದ್ಧಟತನದಿಂದ ವರ್ತಿಸಿದ್ದ. ಈ ಬಗ್ಗೆ ಪಿಐ ದೂರು ಆಧರಿಸಿ ಕೆ.ಪಿ. ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ವಿಭಾಗದ ಡಿಸಿಪಿ ಎಸ್‌. ಗಿರೀಶ್, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಮಧುಸೂದನ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾಗಡಿ ರಸ್ತೆಯ ಟೋಲ್‌ ಗೇಟ್ ಬಳಿ ಮಧುಸೂದನ್ ಅವರ ಸಂಬಂಧಿ ಮಾಂಸದ ಹೋಟೆಲ್‌ ನಡೆಸುತ್ತಿದ್ದಾರೆ. ಈ ಹೋಟೆಲ್‌ನಲ್ಲಿ ಊಟದ ಜತೆ ಅಕ್ರಮವಾಗಿ ಮದ್ಯ ಸಹ ಮಾರಾಟವಾಗುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇತ್ತು. ಅಲ್ಲದೆ ಪಾದಚಾರಿ ಮಾರ್ಗವನ್ನು ಸಹ ಅತಿಕ್ರಮಿಸಿಕೊಂಡಿದ್ದರಿಂದ ಸಾರ್ವಜನಿಕರು ಓಡಾಟಕ್ಕೆ ಅಡ್ಡಿಯಾಗಿತ್ತು. ಹೀಗಾಗಿ ಹೋಟೆಲ್ ಬಳಿ ಪರಿಶೀಲನೆಗೆ ತೆರಳಿದ ಪಿಐ ಗೋವಿಂದರಾಜು ಅವರಿಗೆ ನನಗೂ ಗೊತ್ತಿದೆ ಕಣ್ರೀ ಕಾನೂನು ಎಂದೆಲ್ಲ ಮಾತನಾಡಿ ಮಧುಸೂದನ್ ಉದ್ಧಟತನ ತೋರಿಸಿದ್ದರು ಎಂದು ತಿಳಿದು ಬಂದಿದೆ.