ಸಾರಾಂಶ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾನುವಾರ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಪೊಲೀಸರ ಮೇಲೆಯ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ದರೋಡೆಕೋರರ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ನಡೆದಿದೆ.
ಕಳೆದ ನ. 8ರಂದು ಹುಬ್ಬಳ್ಳಿಯ ರೈಲು ನಿಲ್ದಾಣದ ಬಳಿ 15 ಜನರಿದ್ದ ಗ್ಯಾಂಗ್‌ವೊಂದು ಸಾಂಗ್ಲಿ ಮೂಲದ ರಾಹುಲ್ ಸುರ್ವೆ ಎಂಬುವವರ ಕಾರನ್ನು ತಡೆದು ಬೆದರಿಕೆ ಹಾಕಿ ದರೋಡೆ ಮಾಡಿದ್ದರು. ಈ ಕುರಿತು ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಇಬ್ಬರು ಪ್ರಮುಖ ದರೋಡೆಕೋರರಾದ ಕುರ್ತಾ ಅಲಿಯಾಸ್ ಭರತ್ ಕುಮಾರ್ ಹಾಗೂ ಫಾರೂಕ್ ಅಲಿಯಾಸ್ ಟೊಮೆಟೊ ಫಾರೂಕ್‌ನನ್ನು ಬಂಧಿಸಿ ಕರೆತಂದಿತ್ತು. ಭಾನುವಾರ ಸಿಸಿಬಿ ಪೊಲೀಸರು ನಗರದ ಗಬ್ಬೂರು ಕ್ರಾಸ್ ಬಳಿ ಸ್ಥಳ ಮಹಜರಿಗೆಂದು ಕರೆದುಕೊಂಡು ಹೋದ ಸಂದರ್ಭದಲ್ಲಿ ಓರ್ವ ಮಹಿಳಾ ಪಿಎಸ್‌ಐ ಸೇರಿದಂತೆ ಮೂವರು ಪೊಲೀಸರ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪಿಗಳು ತಪ್ಪಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ಫಾರೂಕ್‌ನ ಕಾಲಿಗೆ ಎರಡು ಗುಂಡು ಹಾಗೂ ಭರತ್ ಕಾಲಿಗೆ ಒಂದು ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಮೂವರು ಪೊಲೀಸ್ ಸಿಬ್ಬಂದಿಯನ್ನು ಹಾಗೂ ಇಬ್ಬರು ಆರೋಪಿಗಳನ್ನು ಸ್ಥಳೀಯ ಕೆಎಂಸಿಆರ್‌ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನೆಯ ಮಾಹಿತಿ ಪಡೆದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಭಾನುವಾರ ಸಂಜೆ ಕೆಎಂಸಿಆರ್‌ಐಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.ಈ ವೇಳೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತರು, ಕಳೆದ 8ರಂದು ಹುಬ್ಬಳ್ಳಿ ರೈಲು ನಿಲ್ದಾಣದ ಬಳಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳಾದ ಕುರ್ತಾ ಅಲಿಯಾಸ್ ಭರತ್ ಕುಮಾರ್ ಹಾಗೂ ಫಾರೂಕ್ ಅಲಿಯಾಸ್ ಟೊಮೆಟೊ ಫಾರೂಕ್ ಎಂಬುವವರನ್ನು ಬಂಧಿಸಲಾಗಿತ್ತು. ಸ್ಥಳ ಮಹಜರಿಗಾಗಿ ಕರೆದುಕೊಂಡು ಹೋದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಫಾರೂಕ್‌ನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ 17ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೆ, ಭರತ್‌ನ ಮೇಲೆಯೂ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಈ ದರೋಡೆ ಪ್ರಕರಣದಲ್ಲಿ ಮಂಗಳೂರು, ಬೆಂಗಳೂರು, ಕೇರಳ ಮೂಲದವರು ಭಾಗಿಯಾಗಿರುವ ಮಾಹಿತಿಯಿದೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದ್ದು, ಆದಷ್ಟು ಶೀಘ್ರ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.