ಮಳೂರು ಗ್ರಾಪಂ ಸದಸ್ಯನ ಅಪಹರಣ ಯತ್ನ

| Published : Aug 05 2025, 12:30 AM IST

ಸಾರಾಂಶ

ಚನ್ನಪಟ್ಟಣ: ಕೆರೆ ಏರಿ ಮೇಲೆ ಬೈಕಿನಲ್ಲಿ ಹೋಗುತ್ತಿದ್ದ ಗ್ರಾಪಂ ಸದಸ್ಯನನ್ನು ಕಾರಿನಲ್ಲಿ ಬಂದ ಐವರು ಅಪರಿಚಿತರು ಅಪಹರಿಸಲು ಯತ್ನಿಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಳೂರು ಕೆರೆ ಏರಿ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.

ತಾಲೂಕಿನ ಕೋಟಮಾರನಹಳ್ಳಿ ಗ್ರಾಮದ ಮಳೂರು ಗ್ರಾಪಂ ಸದಸ್ಯ ವೆಂಕಟೇಶ್‌ ಅಪಹರಣಕ್ಕೆ ಯತ್ನಿಸಲಾಗಿದೆ. ಅಪರಿಚಿತರು ಕಿಡ್ನಾಪ್ ಮಾಡಲು ಯತ್ನಿಸಿದ ವೇಳೆ ತಕ್ಷಣ ಸ್ಥಳೀಯರು ಆತನನ್ನು ರಕ್ಷಿಸಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಘಟನೆ ಸಂಬಂಧ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಐವರ ವಿರುದ್ಧ ದೂರು ದಾಖಲಾಗಿದೆ.ಮಳೂರು ಗ್ರಾಪಂ ಅಧ್ಯಕ್ಷ ಚೇತನ್ ಕುಮಾರ್, ಸದಸ್ಯ ಮಳೂರು ರಾಜೇಶ್, ಮಾಜಿ ಅಧ್ಯಕ್ಷ ಕೋಟಮಾರನಹಳ್ಳಿ ರಮೇಶ್, ಶಿವಕುಮಾರ್, ಶಶಿಕುಮಾರ್ ಮೇಲೆ ಪ್ರಕರಣ ದಾಖಲಾಗಿದೆ.

ಘಟನೆ ವಿವರ:

ಮಳೂರು ಗ್ರಾಪಂ ಅಧ್ಯಕ್ಷ ಚೇತನ್ ವಿರುದ್ಧ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು, ಈ ವಿಚಾರದಲ್ಲಿ ಸಾಕಷ್ಟು ಗೊಂದಲಗಳುಂಟಾಗಿ ಅಂತಿಮವಾಗಿ ನ್ಯಾಯಾಲಯದ ಮೇಟ್ಟಿಲೇರಿದ್ದ ಈ ಪ್ರಕರಣದಲ್ಲಿ ನ್ಯಾಯಾಲಯ ಆ.11ರಂದು ಅವಿಶ್ವಾಸ ನಿರ್ಣಯ ಸಭೆಯನ್ನು ನಡೆಸುವಂತೆ ಸೂಚಿಸಿತ್ತು.

ಜೆಡಿಎಸ್ ಬೆಂಬಲಿತರಾಗಿ ಆಯ್ಕೆಯಾಗಿದ್ದ ವೆಂಕಟೇಶ್ ಅಧ್ಯಕ್ಷರ ವಿರುದ್ಧ ಮತ ಚಲಾಯಿಸುತ್ತಾರೆಂಬ ಭಯದಲ್ಲಿ ಅಧ್ಯಕ್ಷ ಮತ್ತವರ ಸಹಚರರ ಕುಮ್ಮಕ್ಕಿನಿಂದ ಈ ಕಿಡ್ನಾಪ್ ಪ್ರಕರಣ ನಡೆದಿದೆ ಎಂದು ವೆಂಕಟೇಶ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.(ಗ್ರಾಪಂ ಸದಸ್ಯ ವೆಂಕಟೇಶ್)