ಸಂಡೂರಲ್ಲಿ ಕೊಲೆಗೆ ಯತ್ನ: ಮೂವರಿಗೆ ಗಾಯ

| Published : Jan 04 2025, 12:31 AM IST

ಸಾರಾಂಶ

ಪ್ರೀತಿಸಿದ್ದ ಯುವತಿ ತನ್ನ ಪ್ರೀತಿಯನ್ನು ಮುಂದುವರಿಸಲು ಒಪ್ಪದ್ದರಿಂದ ಕೋಪಗೊಂಡ ಪ್ರೇಮಿ ಶುಕ್ರವಾರ ಮಧ್ಯಾಹ್ನ ಯುವತಿಯ ಮನೆಗೆ ಆಗಮಿಸಿ, ಯುವತಿ, ಯುವತಿಯ ತಾಯಿ ಹಾಗೂ ಸಹೋದರನ ಮೇಲೆ ಮಚ್ಚಿನಿಂದ ಹಲ್ಲೆಮಾಡಿ, ಕೊಲೆಗೆ ಯತ್ನಿಸಿದ ಘಟನೆ ಸಂಡೂರು ಪಟ್ಟಣದ ಶಿಕ್ಷಕರ ಕಾಲನಿಯಲ್ಲಿ ನಡೆದಿದೆ.

ಸಂಡೂರು: ಪ್ರೀತಿಸಿದ್ದ ಯುವತಿ ತನ್ನ ಪ್ರೀತಿಯನ್ನು ಮುಂದುವರಿಸಲು ಒಪ್ಪದ್ದರಿಂದ ಕೋಪಗೊಂಡ ಪ್ರೇಮಿ ಶುಕ್ರವಾರ ಮಧ್ಯಾಹ್ನ ಯುವತಿಯ ಮನೆಗೆ ಆಗಮಿಸಿ, ಯುವತಿ, ಯುವತಿಯ ತಾಯಿ ಹಾಗೂ ಸಹೋದರನ ಮೇಲೆ ಮಚ್ಚಿನಿಂದ ಹಲ್ಲೆಮಾಡಿ, ಕೊಲೆಗೆ ಯತ್ನಿಸಿದ ಘಟನೆ ಪಟ್ಟಣದ ಶಿಕ್ಷಕರ ಕಾಲನಿಯಲ್ಲಿ ನಡೆದಿದೆ.

ಹಲ್ಲೆ ನಡೆಸಿದ ಆರೋಪಿ ಯುವಕ ವಿಜಯನಗರ ಜಿಲ್ಲೆಯ ಪಾಪಿನಾಯಕನ ಹಳ್ಳಿಯ ನವೀನ್‌ಕುಮಾರ್ (೨೪). ಈ ದುರ್ಘಟನೆಯಲ್ಲಿ ಯುವತಿ ಕೀರ್ತಿ (೨೩), ಯುವತಿಯ ತಾಯಿ ಕಮಲಾಕ್ಷಿ (೪೦) ಚಿಕ್ಕ ಪ್ರಮಾಣದ ಗಾಯಗಳಾಗಿವೆ. ಯುವತಿಯ ಸಹೋದರ ಕಾರ್ತಿಕ್ (೨೭) ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ತೋರಣಗಲ್ಲಿನ ಜಿಂದಾಲ್ ಸಂಜೀವಿನ ಆಸ್ಪತ್ರೆಗೆ ಕಳುಹಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.

ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿ ನವೀನ್‌ಕುಮಾರ್ ಹಾಗೂ ಹಲ್ಲೆಗೊಳಗಾದ ಕೀರ್ತಿ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಕೀರ್ತಿ ಆತನಿಂದ ದೂರ ಇದ್ದರು. ಇದರಿಂದ ಕೋಪಗೊಂಡ ನವೀನ್‌ಕುಮಾರ್ ಶುಕ್ರವಾರ ಕೀರ್ತಿ ಹಾಗೂ ಅವರ ತಾಯಿ ಮತ್ತು ಅಣ್ಣನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದ ನಂತರ ಕಾರಿನಲ್ಲಿ ಸಾಗಿ, ಯಶವಂತನಗರದ ಗಂಡಿ ಮಲಿಯಮ್ಮ ದೇವಸ್ಥಾನದ ಬಳಿ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ. ಹಲ್ಲೆಗೆ ಬಳಸಿದ್ದು ಎನ್ನಲಾದ ಮಚ್ಚು ಮನೆಯ ಬಳಿಯಲ್ಲಿ ಬಿದ್ದಿದೆ. ಪೊಲೀಸರು ಹಲ್ಲೆ ಆರೋಪಿಯ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ. ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.