ಈ ವೇಳೆ ಬೈಕ್ ನಲ್ಲಿ ಬಂದ ಮಧು ಅಣ್ಣ ರಾಜೇಶ್ ತಮ್ಮನ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ರಕ್ಷಣೆಗಾಗಿ ಚೀರಾಟ, ಕುಗಾಟ ನಡೆಸಿದ್ದಾಗ ಆರೋಪಿಗಳು ಬಂದ ಆಟೋದಲ್ಲಿಯೇ ಸ್ಥಳದಿಂದ ಪರಾರಿಯಾಗಿದ್ದಾರೆ.

ಪೂಜಾ ಕುಣಿತ ಕಲಾವಿದನಿಗೆ ಗಾಯ, ಆಸ್ಪತ್ರೆಗೆ ದಾಖಲು

ಕನ್ನಡಪ್ರಭ ವಾರ್ತೆ ಮದ್ದೂರುಕುಟುಂಬ ವಿರೋಧದ ನಡುವೆ ಅನ್ಯಜಾತಿ ಯುವಕನನ್ನು ಪ್ರೇಮ ವಿವಾಹವಾದ ಹಿನ್ನೆಲೆಯಲ್ಲಿ ಯುವತಿ ಸಂಬಂಧಿಕರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನ ಹತ್ಯೆಗೆ ವಿಫಲ ಯತ್ನ ನಡೆಸಿರುವ ಘಟನೆ ತಾಲೂಕಿನ ಆಲೂರು ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಜರುಗಿದೆ.

ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದ ವೆಂಕಟೇಶನ ಪುತ್ರ, ಪೂಜಾ ಕುಣಿತ ಕಲಾವಿದ ಮಧು (28) ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ಬೆನ್ನು, ಕೈ ಹಾಗೂ ಎದೆ ಭಾಗಕ್ಕೆ ತೀವ್ರವಾಗಿ ಗಾಯವಾಗಿದ್ದು, ಮದ್ದೂರು ಆಸ್ಪತ್ರೆ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಲ್ಲೆಗೊಳಗಾಗಿರುವ ಮಧು ಕೆ.ಬೆಳ್ಳೂರು ಗ್ರಾಮದ ಲಾವಣ್ಯ (19)ಎಂಬ ಅನ್ಯ ಜಾತಿ ಯುವತಿಯನ್ನು ಪ್ರೀತಿಸಿ ಆಕೆ ಕುಟುಂಬದವರ ವಿರೋಧದ ನಡುವೆ ಕಳೆದ ಏಳು ತಿಂಗಳ ಹಿಂದೆ ವಿವಾಹವಾಗಿದ್ದನು. ಈ ವಿಚಾರವಾಗಿ ಆಕ್ರೋಶಗೊಂಡಿದ್ದ ಲಾವಣ್ಯ ಕುಟುಂಬದವರು ಮಧು ವಿರುದ್ಧ ಸೇಡು ತೀರಿಸಿಕೊಳ್ಳಲು ಗ್ರಾಮದ ವಿಶ್ವ ಎಂಬುವರೊಂದಿಗೆ ಪ್ರಸ್ತಾಪ ಮಾಡಿ ಮಧು ಕೊಲೆಗೆ ಸಂಚು ರೂಪಿಸಿದ್ದರು.

ಕಳೆದ ಎರಡು ಮೂರು ತಿಂಗಳಿಂದ ವಿಶ್ವ ಮತ್ತು ಆತನ ಸಹಚರರು ಮಧುನನ್ನು ಹಿಂಬಾಲಿಸಿ ಹತ್ಯೆ ಮಾಡಲು ಪ್ರಯತ್ನ ನಡೆಸಿದ್ದರಾದರೂ ಸಫಲವಾಗಿರಲಿಲ್ಲ. ಶುಕ್ರವಾರ ಬೆಳಗ್ಗೆ ಕೊಕ್ಕರೆ ಬೆಳ್ಳೂರಿನ ಪೂಜಾ ಕುಣಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸ್ವ ಗ್ರಾಮದಿಂದ ಬೈಕ್ ನಲ್ಲಿ ಮದ್ದೂರಿಗೆ ಬಂದು ನಂತರ ಬಸ್ಸಿನಲ್ಲಿ ಪ್ರಯಾಣಿಸಲು ಬರುತ್ತಿದ್ದಾಗ ಆಲೂರು ಗ್ರಾಮದ ಶ್ರೀ ಬೀರೇಶ್ವರ ದೇವಾಲಯದ ಬಳಿ ಆಟೋದಲ್ಲಿ ಬಂದ ವಿಶ್ವ ಮತ್ತು ಆತನ ಸಹಚರರ ಗುಂಪು ಬೈಕ್ ಅಡ್ಡಗಟ್ಟಿ ಲಾಂಗುಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬೈಕ್ ನಲ್ಲಿ ಬಂದ ಮಧು ಅಣ್ಣ ರಾಜೇಶ್ ತಮ್ಮನ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ರಕ್ಷಣೆಗಾಗಿ ಚೀರಾಟ, ಕುಗಾಟ ನಡೆಸಿದ್ದಾಗ ಆರೋಪಿಗಳು ಬಂದ ಆಟೋದಲ್ಲಿಯೇ ಸ್ಥಳದಿಂದ ಪರಾರಿಯಾಗಿದ್ದಾರೆ.

ನಂತರ ರಾಜೇಶ್ ಸ್ನೇಹಿತರು ಮತ್ತು ಸಾರ್ವಜನಿಕರ ಸಹಾಯದಿಂದ ಮಧುನನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿ ಕೊಂಡಿದ್ದಾರೆ. ಸಿಪಿಐ ನವೀನ ತನಿಖೆ ಕೈಗೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.