ಮಹಿಳೆಯ ಕೊಲೆಗೆ ಯತ್ನ: ನಾಲ್ವರು ಆರೋಪಿಗಳ ಬಂಧನ

| Published : Dec 13 2024, 12:46 AM IST

ಸಾರಾಂಶ

ಮಹಿಳೆಯರಿಬ್ಬರಿಗೆ ಅಭಿಷೇಕ ಬಿಲಾನಾ ಎಂಬುವನು ಫೈನಾನ್ಸ್‌ ಮಾಡಿದ್ದ. ಇದರಲ್ಲಿ ಓರ್ವ ಮಹಿಳೆಯ ಜತೆಗೆ ಸಲುಗೆ ಬೆಳೆಸಿದ್ದ. ಹೀಗಾಗಿ ಕೊಲೆಗೆ ಯತ್ನ ನಡೆದಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಹುಬ್ಬಳ್ಳಿ:

ಇಲ್ಲಿನ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬ್ಯಾಂಕರ್ಸ್ ಕಾಲನಿಯಲ್ಲಿ ಬುಧವಾರ ಮಧ್ಯಾಹ್ನ ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಹು-ಧಾ ಮಹಾನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ, ಹೆಗ್ಗೇರಿಯ ಅಭಿಷೇಕ ಬಿಲಾನಾ ಎಂಬ ಯುವಕ ಬ್ಯಾಂಕರ್ಸ್ ಕಾಲನಿಯಲ್ಲಿನ ಪಲ್ಲವಿ ಹಾಗೂ ಸುವರ್ಣಾ ಎಂಬ ಇಬ್ಬರು ಮಹಿಳೆಯರಿಗೆ ಫೈನಾನ್ಸ್ ಮಾಡಿದ್ದನು. ಈ ನಡುವೆ ಸುವರ್ಣಾ ಎಂಬ ಮಹಿಳೆಯ ಜತೆ ಅಭಿಷೇಕ್ ಅತಿಯಾದ ಸಲುಗೆ, ಸ್ನೇಹ ಬೆಳೆಸಿಕೊಂಡಿದ್ದನು. ಇವರಿಬ್ಬರ ವಿಚಾರವನ್ನು ಹಲ್ಲೆಗೊಳಗಾದ ಪಲ್ಲವಿ ಸುವರ್ಣಾಳ ಮನೆಯವರಿಗೆ ತಿಳಿಸಿದ್ದರಿಂದ ಮನೆಯಲ್ಲಿ ಜಗಳವಾಗಿತ್ತು. ಇದರಿಂದಾಗಿ ಕೋಪಗೊಂಡ ಸುವರ್ಣ, ತನ್ನ ಸ್ನೇಹಿತೆಯಾದ ಪಲ್ಲವಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ಅಭಿಷೇಕ್‌ನೊಂದಿಗೆ ಪ್ಲ್ಯಾನ್ ಮಾಡಿ, ಅಭಿಷೇಕ್ ತನ್ನ ಇಬ್ಬರು ಸ್ನೇಹಿತರಾದ ಅಭಿಷೇಕ ಹಾಗೂ ಪ್ರಜ್ವಲ್ ಎಂಬುವರಿಂದ ಮಚ್ಚನ್ನು ತರಿಸಿ ಪಲ್ಲವಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನಿಸಿದ ಘಟನೆ ನಡೆದಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣೆಯ ಪಿಐ ನೇತೃತ್ವದ ತಂಡವು ಆರೋಪಿಗಳಾದ ಅಭಿಷೇಕ್ ಬಿಲಾನಾ, ಸುವರ್ಣ ಜರೆ, ಅಭಿಷೇಕ್ ಶಿಕ್ಕಲಿಗಾರ್, ಪ್ರಜ್ವಲ್ ಘೋಡಕೆ ಎಂಬ ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ತಿಳಿಸಿದರು.

ಈ ವೇಳೆ ಡಿಸಿಪಿಗಳಾದ ಮಹಾನಿಂಗ ನಂದಗಾವಿ. ರವೀಶ ಸಿ.ಆರ್‌, ಎಸಿಪಿ ಉಮೇಶ ಚಿಕ್ಕಮಠ, ಪಿಐಗಳಾದ ಸುರೇಶ ಯಳ್ಳೂರ, ರಾಘವೇಂದ್ರ ಹಳ್ಳೂರ ಸೇರಿದಂತೆ ಹಲವರಿದ್ದರು.