ಕಡಿಯಾಳಿ ದೇವಸ್ಥಾನದಲ್ಲಿ ಕಳವಿಗೆ ಯತ್ನ: ಆರೋಪಿಗಳ ಬಂಧನ

| Published : Jul 27 2025, 12:04 AM IST

ಸಾರಾಂಶ

ಆರೋಪಿಗಳಲ್ಲಿ ಒಬ್ಬಾತ ದೇವಸ್ಥಾನದ ದ್ವಾರ ಬಾಗಿಲನ್ನು ಒಡೆಯಲು ಪ್ರಯತ್ನಿಸುತ್ತಿದ್ದ. ಅಲ್ಲೇ ಇದ್ದ ಕಾವಲುಗಾರ ಬೊಬ್ಬೆ ಹಾಕಿ ಆತನನ್ನು ಹಿಡಿಯಲು ಹೋದಾಗ ಇಬ್ಬರೂ ಆರೋಪಿಗಳು ಅಲ್ಲಿಂದ ಪರಾರಿಯಾದರು. ಅವರಲ್ಲೊಬ್ಬನಿಗೆ ಮೂರ್ಚೆರೋಗವಿದ್ದು, ಓಡುವಾಗ ಅಲ್ಲಿನ ಪೆಟ್ರೋಲ್ ಬಂಕ್ ಬಳಿ ಕುಸಿದು ಬಿದ್ದ. ಇನ್ನೊಬ್ಬ ಆತನನ್ನು ಉಪಚರಿಸತೊಡಗಿದ.

ಒಬ್ಬಾತನಿಗಿದ್ದ ಮೂರ್ಚೆರೋಗ ಇಬ್ಬರಿಗೆ ಸಂಚಕಾರವಾಯಿತು!

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಕಡಿಯಾಳಿಯ ಶ್ರೀ ಮಹಿಷಾಮರ್ದಿನಿ ದೇವಸ್ಥಾನದಲ್ಲಿ ಶನಿವಾರ ಮುಂಜಾನೆ ಕಳ್ಳತನಕ್ಕೆ ಬಂದಿದ್ದ ಇಬ್ಬರು ಆರೋಪಿಗಳನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಗಳಲ್ಲಿ ಒಬ್ಬಾತ ದೇವಸ್ಥಾನದ ದ್ವಾರ ಬಾಗಿಲನ್ನು ಒಡೆಯಲು ಪ್ರಯತ್ನಿಸುತ್ತಿದ್ದ. ಅಲ್ಲೇ ಇದ್ದ ಕಾವಲುಗಾರ ಬೊಬ್ಬೆ ಹಾಕಿ ಆತನನ್ನು ಹಿಡಿಯಲು ಹೋದಾಗ ಇಬ್ಬರೂ ಆರೋಪಿಗಳು ಅಲ್ಲಿಂದ ಪರಾರಿಯಾದರು. ಅವರಲ್ಲೊಬ್ಬನಿಗೆ ಮೂರ್ಚೆರೋಗವಿದ್ದು, ಓಡುವಾಗ ಅಲ್ಲಿನ ಪೆಟ್ರೋಲ್ ಬಂಕ್ ಬಳಿ ಕುಸಿದು ಬಿದ್ದ. ಇನ್ನೊಬ್ಬ ಆತನನ್ನು ಉಪಚರಿಸತೊಡಗಿದ.ತಕ್ಷಣ ಅವರನ್ನು ಹುಡುಕಿಕೊಂಡು ಬಂದ ಸಾರ್ವಜನಿಕರು ಇಬ್ಬರನ್ನು ಹಿಡಿದು, ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಂದ ಮೇಲೆ ಬಿದ್ದ ಕಳ್ಳನನ್ನು ಆಸ್ಪತ್ರೆಗೆ, ಇನ್ನೊಬ್ಬನನ್ನು ಲಾಕಪ್‌ಗೆ ಸೇರಿಸಲಾಯಿತು.

ಬಂಧಿತ ಆರೋಪಿಗಳನ್ನು ಕೇರಳದ ನೆಡಮಂಗಾಡು ಜಿಲ್ಲೆಯ ತಿರುವನಂತಪುರಂನ ಕಿರಣ್‌ ಜೆ.ಜೆ. (32) ಮತ್ತು ವಿಷ್ಣು (30) ಎಂದು ಗುರುತಿಸಲಾಗಿದೆ.