ಕನ್ನಡಪ್ರಭ ವಾರ್ತೆ ಬೆಳಗಾವಿ ಗಾಂಜಾ ಮಾರಾಟ, ಸೇವನೆಗೆ ಸಂಪೂರ್ಣ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ಗಾಂಜಾ ಸೇವನೆ ಪರೀಕ್ಷಾ ಕಿಟ್ ವಿತರಣೆ ಮಾಡಲಾಗಿದೆ. ಗಾಂಜಾ ಪ್ರಕರಣದಲ್ಲಿ ಮಾರಾಟಗಾರ ಜತೆಗೆ ಸೇವನೆ ಮಾಡಿದವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಸ್ಪಿ ಕೆ.ರಾಮರಾಜನ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಗಾಂಜಾ ಮಾರಾಟ, ಸೇವನೆಗೆ ಸಂಪೂರ್ಣ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ಗಾಂಜಾ ಸೇವನೆ ಪರೀಕ್ಷಾ ಕಿಟ್ ವಿತರಣೆ ಮಾಡಲಾಗಿದೆ. ಗಾಂಜಾ ಪ್ರಕರಣದಲ್ಲಿ ಮಾರಾಟಗಾರ ಜತೆಗೆ ಸೇವನೆ ಮಾಡಿದವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಸ್ಪಿ ಕೆ.ರಾಮರಾಜನ್ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, ನಗರ, ಗ್ರಾಮೀಣ ಭಾಗದಲ್ಲಿ ಗಾಂಜಾ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಎಲ್ಲರಿಗೂ ನಿರ್ದೇಶನ ನೀಡಲಾಗಿದೆ. ಜಿಲ್ಲೆಯ 34 ಠಾಣೆಗಳಿಗೆ ತಲಾ 40 ರಿಂದ 50 ರಂತೆ ಒಟ್ಟು 1,550 ಗಾಂಜಾ ಸೇವನೆ ಪರೀಕ್ಷಾ ಕಿಟ್ ನೀಡಲಾಗಿದೆ. ಚಿಕ್ಕೋಡಿ, ರಾಯಬಾಗ, ಖಾನಾಪುರ ತಾಲೂಕಿನಲ್ಲಿ ಮಹಿಳೆ ಸೇರಿ ಹತ್ತು ಜನ ಮಾರಾಟಗಾರರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.ಗೋವಾ, ಮಹಾರಾಷ್ಟ್ರ ಗಡಿಭಾಗದ ಜಿಲ್ಲೆಯ ವಿವಿಧ ಭಾಗಗಳಿಂದ ಗಾಂಜಾ ಸಾಗಾಟ, ಮಾರಾಟಗಾರರನ್ನು ಪತ್ತೆ ಹಚ್ಚುವ ಕಾರ್ಯ ಆರಂಭಿಸಲಾಗಿದೆ. ಇಂತಹ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಮಾರಾಟಗಾರರನ್ನು ಶಿಕ್ಷೆಗೆ ಒಳಪಡಿಸಲು ಸಾಕ್ಷಿಗಾಗಿ ಗಾಂಜಾ ಸೇವನೆ ಮಾಡಿದವರ ಮೇಲೆ ಕೇಸ್ ಹಾಕಲಾಗುತ್ತಿದೆ. ಒಂದು ವೇಳೆ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದು ಮತ್ತೆ ಅದೇ ಚಟುವಟಿಕೆ ನಡೆಸಿದರೆ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ನಗರ, ಗ್ರಾಮೀಣ ಭಾಗದಲ್ಲಿ ರಸ್ತೆ ಅಪಘಾತ ತಡೆಗಟ್ಟಲು ಮೊದಲ ಹಂತದಲ್ಲಿ ಮದ್ಯ ಸೇವಿಸಿ ವಾಹನ ಚಲಾವಣೆ ಮಾಡಿರುವುದು ಖಚಿತಪಟ್ಟರೆ ಅವರ ಮೇಲೆ ಕೊಲೆ ಕೇಸ್ ದಾಖಲು ಮಾಡಲಾಗುವುದು. ರಸ್ತೆ ಬದಿಯಲ್ಲಿ ದಾಬಾ, ಹೋಟೆಲ್ ಹಾಗೂ ಹಳ್ಳಿಗಳ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕೇಸ್ ದಾಖಲು ಮಾಡಲಾಗುವುದು. ಅಲ್ಲದೇ, ವ್ಯಾಪಾರ ಪರವಾನಗಿ ರದ್ದು ಮಾಡಲಾಗುವುದು ಎಂಬುದನ್ನು ವಿವರಿಸಿದರು.ಜಿಲ್ಲಾದ್ಯಂತ ಮದ್ಯದ ಅಂಗಡಿ, ಹೋಟೆಲ್, ದಾಬಾಗಳ ಮಾಲೀಕರು ಕಡ್ಡಾಯವಾಗಿ ಒಳಗೆ ಮತ್ತು ಹೊರಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಮದ್ಯ ಸೇವನೆ ಮಾಡಿ ವಾಹನ ಚಲಾವಣೆ ಮಾಡಿದರೆ ಚಾಲಕರ ಮಾಹಿತಿ ನೀಡಬೇಕು. ಒಂದು ವೇಳೆ ಮದ್ಯ ಸೇವನೆ ಮಾಡಿರುವ ಚಾಲಕನಿಂದ ಅಪಘಾತವಾದರೆ ಮದ್ಯದ ಅಂಗಡಿಗಳ ಮಾಲೀಕರ ಮೇಲೆಯೂ ಕೇಸ್ ದಾಖಲಾಗುವುದು. ಹೀಗಾಗಿ ಅಪಘಾತ ತಡೆಗೆ ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.