ಗಮನ ಸೆಳೆದ ಕೃಷಿ ಪರಿಕರ ವಸ್ತು ಪ್ರದರ್ಶನ

| Published : Jan 22 2025, 12:31 AM IST

ಸಾರಾಂಶ

ಈಗ ಯಂತ್ರೋಪಕರಣಗಳು ಬಂದಿವೆ. ಈ ಹಿಂದೆ ಕಣದೊಳಗೆ ನೇಮನಿತ್ಯದಿಂದ ರಾಶಿ ಮಾಡಿದಾಗ ಮನೆಯಲ್ಲಿ ಸೌಭ್ಯಾಗ ಉಳಿಯುತ್ತಿತ್ತು

ಎಸ್.ಎಂ.ಸೈಯದ್ ಗಜೇಂದ್ರಗಡ

ಪಟ್ಟಣದ ಸಿಬಿಎಸ್‌ಸಿ ಶಾಲೆಯಲ್ಲಿ ನಡೆದ ೧೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ಪರಿಕರಗಳ ವಸ್ತು ಪ್ರದರ್ಶನವು ಸಾಹಿತ್ಯಾಸಕ್ತರ, ವಿದ್ಯಾರ್ಥಿ ಹಾಗೂ ಸಾರ್ವಜನಿಕರ ಗಮನ ಸೆಳೆಯುವುದರ ಜತೆಗೆ ಯುವ ಸಮೂಹ ಹುಬ್ಬೇರಿಸುವಂತೆ ಮಾಡಿದೆ.

ಹಲವು ಪ್ರಥಮಗಳಿಗೆ ಕಾರಣವಾಗಿರುವ ಪಟ್ಟಣದಲ್ಲಿನ ಜಿಲ್ಲಾ ಸಾಹಿತ್ಯ ಸಮ್ಮೇಳನವು ಕವಿಗೊಷ್ಠಿ, ಚಿಂತನ-ಮಂಥನ, ಅಧ್ಯಕ್ಷರ ಭಾಷಣಗಳು ಸಭಿಕರ ಗಮನ ಸೆಳೆದು ವೇದಿಕೆಯತ್ತ ಜನರನ್ನು ಕರೆ ತಂದರೆ ಸಮ್ಮೇಳನ ಮುಗಿಸಿಕೊಂಡು ಹಾಗೂ ನಡುವೆ ಹೊರ ಬರುವ ಯುವ ಸಮೂಹ, ಸಾಹಿತಿಗಳು ಹಾಗೂ ಸಾರ್ವಜನಿಕರನ್ನು ತನ್ನತ್ತ ಕೈ ಬಿಸಿ ಕರೆಯುವಂತೆ ಮಾಡುತ್ತಿದ್ದುದ್ದು ಮಲ್ಲಯ್ಯ ಮಹಾಪುರಷಮಠ ಅವರ ಕೃಷಿ ಪರಿಕರ ವಸ್ತು ಪ್ರದರ್ಶನ.

ರೋಣ ಪಟ್ಟಣದ ನಿವಾಸಿಯಾಗಿರುವ ಮಲ್ಲಯ್ಯ ಮಹಾಪುರಷಮಠ ಅವರು ಕಳೆದ ೧೫ ವರ್ಷಗಳಿಂದ ಕೃಷಿ ವಸ್ತುಗಳಾದ ಗಳಗಿ, ಕರಾರಿ, ಬರಗು, ಕುಡಗೋಲು, ಬೆಣ್ಣೆ ಕುಡಗೋಲು, ದನಾ ಕುಡಗೋಲು, ಹುನಸಿ ಕೋಲು, ಬಗರಿ, ಎತ್ತು, ತತ್ತರಾಣಿ ಗುದ್ದಿ, ರಥ, ಇಟ್ಟಂಗಿ ಮಣಿ, ಗಚ್ಚಿನ ಗಾಣ, ಹಳೆ ಬಂಡಿ ಸೇರಿ ನಯಾ ಪೈಸೆಯಿಂದ ಹಿಡಿದು ಚಲಾವಣೆಯಲ್ಲಿರುವ ನೋಟು ಸೇರಿದಂತೆ ೫೦೦ಕ್ಕೂ ಅಧಿಕ ಪರಿಕರ ಪ್ರದರ್ಶನಕ್ಕೆ ಇರಿಸಿದ್ದು, ಪೂರ್ವಜರು ಜೀವನ ನಡೆಸಲು ಬಳಸುತ್ತಿದ್ದ ಪರಿಕರಗಳ ಬಗ್ಗೆ ಮಲಯ್ಯ ಮಾಹಿತಿ ನೀಡುತ್ತಿದ್ದಾರೆ.

ಈಗ ಯಂತ್ರೋಪಕರಣಗಳು ಬಂದಿವೆ. ಈ ಹಿಂದೆ ಕಣದೊಳಗೆ ನೇಮನಿತ್ಯದಿಂದ ರಾಶಿ ಮಾಡಿದಾಗ ಮನೆಯಲ್ಲಿ ಸೌಭ್ಯಾಗ ಉಳಿಯುತ್ತಿತ್ತು. ಈಗ ಯಂತ್ರೋಪಕರಣದಿಂದ ಮಾಡುವ ರಾಶಿ ಸುಲಭವಾಗಿರಬಹುದು ಆದರೆ ಅದು ಸಾಂಪ್ರದಾಯಕ ಅಲ್ಲ, ಮೂಲ ವ್ಯವಸಾಯದ ತತ್ವ ಅದಲ್ಲ ಎನ್ನುತ್ತಾರೆ. ಪೆಟ್ರೋಲ್ ಖಾಲಿಯಾದರೆ ಜಗತ್ತು ಕತ್ತಲಲ್ಲಿ ಮುಳಗಲಿದೆ. ಹಿಂದೆ ಎಣ್ಣೆಯಿಂದ ಹಿಡಿದು ಪ್ರತಿಯೊಂದು ಅವಶ್ಯಕ ಸಾಮಗ್ರಿಗಳನ್ನು ಯಂತ್ರ ರಹಿತವಾಗಿ ಸಿದ್ಧ ಮಾಡಿಕೊಳ್ಳುತ್ತಿದ್ದರು ಎಂದು ವಿವರಿಸುತ್ತಿರುವ ಮಹಾಪುರುಷಮಠ ಅವರು ಅಂತಹ ವಸ್ತುಗಳು ಮತ್ತು ಜೀವನ ಪದ್ಧತಿ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ನೀರು ಹಾಗೂ ಪರಿಸರದ ಕಾಳಜಿ ಮರೆಯುತ್ತಿರುವ ಜನತೆಗೆ ಅದರ ಮಹತ್ವ, ಸದ್ಬಳಕೆ ಕುರಿತು ಆಡು ಭಾಷೆಯಲ್ಲಿ ತಿಳಿಸುತ್ತಿರುವುದು ಜನರನ್ನು ಆಕರ್ಷಿಸುತ್ತಿದೆ.

ಪೂರ್ವಜರು ನಡೆಸುತ್ತಿದ್ದ ಜೀವನ ಪದ್ಧತಿ ಹಾಗೂ ಬಳಸುತ್ತಿದ್ದ ಪರಿಕರ ಜನರಿಗೆ ಪರಿಚಯಿಸಲು ಕಳೆದ ೧೫ ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳುತ್ತಿದ್ದೇನೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಜನತೆಯಲ್ಲಿ ಬದಲಾವಣೆ ತರಲು ಸಾಧ್ಯವೆಂದು ನಂಬಿದ್ದು ಜನರಿಗೆ ಕೃಷಿ, ಕನ್ನಡ ಹಾಗೂ ಪರಿಸರ ಮಹತ್ವ ತಿಳಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಕೃಷಿ ಪರಿಕರಗಳ ವಸ್ತು ಪ್ರದರ್ಶನ ಮಾಡುತ್ತಿರುವವ ಮಲ್ಲಯ್ಯ ಮಹಾಪುರಷಮಠ ತಿಳಿಸಿದ್ದಾರೆ.

ನಮ್ಮ ಹಿರಿಕರು ಇಷ್ಟೊಂದು ವಿಧಾನದ ಸಾಮಗ್ರಿಗಳನ್ನು ಬಳಸುತ್ತಿದ್ದರು ಎನ್ನುವದನ್ನು ಕೇಳಿರಲಿಲ್ಲ. ಆದರೆ ಇಂದು ಕಣ್ತುಂಬಿಕೊಂಡಿದ್ದು ಖುಷಿ ತಂದಿದೆ. ಹಲವು ಪರಿಕರಗಳ ಹೆಸರು ವಿಶಿಷ್ಟ ಇರುವಂತೆ ಮಲ್ಲಯ್ಯ ಮಹಾಪುರಷಮಠ ಅವರ ಕಾರ್ಯವೂ ಸಹ ವಿಶಿಷ್ಟವಾಗಿದೆ ಎಂದು ಸ್ಥಳೀಯ ನಿವಾಸಿ ಗುಲಾಂ ಹುನಗುಂದ ಹೇಳಿದರು.