ಸಾರಾಂಶ
ಶಿರಸಿ: ರೈತರ, ಮಠ, ದೇವಸ್ಥಾನಗಳ ಜಮೀನನ್ನು ವಕ್ಫ್ ಬೋರ್ಡ್‌ಗೆ ಬದಲಿಸುವಿಕೆ ತುಘಲಕ್ ಸರ್ಕಾದ ಅವಧಿಯಲ್ಲೂ ಇರಲಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಈ ರೀತಿ ಬೇಕಾಬಿಟ್ಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದನ್ನು ಖಂಡಿಸಿ, ರಾಜ್ಯಾದ್ಯಂತ ನ. ೪ರಂದು ಎಲ್ಲ ತಾಲೂಕು ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಇದುವರೆಗಿನ ವೈಫಲ್ಯದ ಬಗ್ಗೆ, ಅವರ ಭ್ರಷ್ಟಾಚಾರಗಳನ್ನು ವಿರೋಧಿಸಿ ಸದಾ ಹೋರಾಟ ನಡೆಸಿದ್ದೆವು. ಈ ಭ್ರಷ್ಟಾಚಾರ, ವೈಫಲ್ಯತೆಗಳನ್ನು ಮರೆಮಾಚುವ ಸಲುವಾಗಿ ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ರಾಜ್ಯ ಸರ್ಕಾರ ಈ ರೀತಿ ಬೇರೆಯವರ ಆಸ್ತಿಯನ್ನು ವಕ್ಫ್ ಮಂಡಳಿಗೆ ಸೇರಿಸುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ನಿಡಗೋಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಪ್ರಮುಖರಾದ ರವಿಚಂದ್ರ ಶೆಟ್ಟಿ, ಆರ್.ಡಿ. ಹೆಗಡೆ ಜಾನ್ಮನೆ ಮತ್ತಿತರರು ಇದ್ದರು.
ಭಟ್ಕಳದಲ್ಲೂ ಹೋರಾಟ
ಸರ್ಕಾರದ ಹಾಗೂ ವಕ್ಫ್ ಖಾತೆ ಸಚಿವರ ನಡೆಯನ್ನು ಖಂಡಿಸಿ ಭಟ್ಕಳದಲ್ಲಿಯೂ ನ. ೪ರಂದು ೧೧ ಗಂಟೆಗೆ ತಹಸೀಲ್ದಾರ್ ಕಚೇರಿಯ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಬಿಜೆಪಿ ಮಂಡಳ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಡಿಗ ಮಾತನಾಡಿದರು. ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ, ಜಿಲ್ಲಾ ಕಾನೂನು ಪ್ರಕೋಷ್ಟದ ಸಂಚಾಲಕ ಸುರೇಶ ನಾಯ್ಕ, ಜಿಲ್ಲಾ ಮೀನುಗಾರಿಕಾ ಪ್ರಕೋಷ್ಟದ ಸಂಚಾಲಯ ಭಾಸ್ಕರ ದೈಮನೆ, ಜಿಪಂ ರಾಜ್ ಪ್ರಕೋಷ್ಟದ ಸಹ ಸಂಚಾಲಕ ಮೋಹನ ನಾಯ್ಕ, ಮಂಡಳದ ಪ್ರ. ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ, ಉಪಾಧ್ಯಕ್ಷ ಮಂಜಪ್ಪ ನಾಯ್ಕ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮುಂತಾದವರಿದ್ದರು.