ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಂಕ್ರಾಂತಿ ಹಬ್ಬದ ಅಂಗವಾಗಿ ರಾಷ್ಟ್ರ ಸೇವಿಕಾ ಸಮಿತಿ ಬಾಗಲಕೋಟೆ ಘಟಕ ಹಮ್ಮಿಕೊಂಡಿದ್ದ ಮಹಿಳೆಯರ ಪಥ ಸಂಚಲನ ಭಾನುವಾರ ಸಂಭ್ರಮ ಹಾಗೂ ಸಡಗರದಿಂದ ಜರುಗಿತು. ಮಹಿಳಾ ಗಣವೇಷಧಾರಿಗಳ ಆಕರ್ಷಕ ಪಥಸಂಚಲನವನ್ನು ಸಾರ್ವಜನಿಕರು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.ಬಾಗಲಕೋಟೆ ನಗರ ಮದುವಣಗಿತ್ತಿಯಂತೆ ಶೃಂಗಾಗೊಂಡಿತ್ತು. ಬೀದಿ ಬೀದಿಗಳಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಗಲ್ಲಿ ಗಲ್ಲಿಗಳಲ್ಲಿ ರಸ್ತೆ, ಮನೆಗಳ ಮುಂದೆ ರಂಗೋಲಿಯ ಚಿತ್ತಾರ ಗಮನ ಸೆಳೆಯುತ್ತಿದ್ದವು. ಹಸಿರು ತೋರಣಗಳ, ಸ್ವಾಗತ ಕಟೌಟುಗಳು ಎಲ್ಲವೂ ಸೇರಿಕೊಂಡು ಹಬ್ಬದ ವಾತಾವರಣ ಸೃಷ್ಟಿಸಿತ್ತು. ಗಣವೇಶಧಾರಿಗಳ ಸಂಖ್ಯೆ 1 ಸಾವಿರ ಗಡಿ ದಾಟಿತ್ತು. ಕೋಟೆ ನಗರಿಯ ಪ್ರಮುಖ ರಸ್ತೆಗಳಲ್ಲಿ ಶಿಸ್ತಿನ ನಡಿಗೆ ನಡೆಸುತ್ತಿದ್ದರೆ, ರಸ್ತೆಯ ಎರಡು ಇಕ್ಕೆಲಗಳಲ್ಲಿ ನಿಂತಿದ್ದ ಜನಸೋಮ ಪುಷ್ಪಾರ್ಚನೆ ಮಾಡಿ ಸಂಭ್ರಮಸಿದರು. ಬೀದಿ ಬೀದಿಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳು ದೇಶಭಕ್ತರು, ಧಾರ್ಮಿಕ ಮುಖಂಡರು, ರಾಜ ಮಹಾರಾಜರು, ರಾಣಿಯರ ವೇಷಭೂಷಣ ಧರಿಸಿ, ಗಣವೇಶಧಾರಿಗಳಿಗೆ ಪುಷ್ಪ ಚಿಂಚನಗೈಯುತ್ತ ಸ್ವಾಗತಿಸುತ್ತಿದ್ದ ಪರಿ ಕಣ್ಮನ ಸೆಳೆಯಿತು.ಮೊಳಗಿದ ಘೋಷಣೆ:
ಬೋಲೋ ಭಾರತ್ ಮಾತಾಕೀ ಜೈ.. ಮಾತಾ.. ಮಾತಾ.. ಭಾರತ ಮಾತಾ.., ಜೋರ್ ಸೇ ಬೋಲೋ, ಪ್ಯಾರ ಸೇ ಬೋಲೋ ಹಿಂದುಸ್ತಾನ, ಹಿಂದುಸ್ತಾನ.., ಜೈ ಜೈ ಶಿವಾಜಿ, ಜೈ ಜೈ ಭವಾನಿ... ವಂದೇ ಮಾತರಂ... ಘೋಷಣೆಗಳು ಬೀದಿ ಬೀದಿಗಳಲ್ಲಿ ಪ್ರತಿಧ್ವನಿಸಿದವು. ಎರಡು ಮಾರ್ಗದಲ್ಲಿ ಹೊರಟಿದ್ದ ಪಥ ಸಂಚಲನಗಳು ಬಸ್ ನಿಲ್ದಾಣ ರಸ್ತೆಯಲ್ಲಿ ಸಮಾಗಮಗೊಳ್ಳುತ್ತಿದ್ದಂತೆ ನೆರೆದಿದ್ದ ಜನಸ್ತೋಮದ ಸಂಭ್ರಮ ಮುಗಿಲು ಮುಟ್ಟಿತು. ಸಂಜೆ 4 ಗಂಟೆಗೆ ಆರಂಭಗೊಂಡ ಪಥ ಸಂಚಲನ 4.45 ಕ್ಕೆ ರೇಣುಕಾಚಾರ್ಯ ಮಂಗಳ ಭವನ ತಲುಪಿ ಸಮಾಪ್ತಿಗೊಂಡಿತು.ಎರಡು ಮಾರ್ಗದಲ್ಲಿ ಪಥ ಸಂಚಲನ:ಸಂಜೆ ಸರಿಯಾಗಿ 4 ಗಂಟೆಗೆ ಕಿಲ್ಲಾ ಗ್ರಾಮ ದೇವತೆ ದೇವಸ್ಥಾನದಿಂದ ಆರಂಭಗೊಂಡ ಮಹಿಳೆಯರ ಪಥ ಸಂಚಲನ ಯಲ್ಲಮ್ಮನ ದೇವಿ ದೇವಸ್ಥಾನ, ಹನುಮಾನ ಮಂದಿರ, ವಾಡೆ, ಶಿವಶಕ್ತಿ ಗಜಾನನ ಚೌಕ್, ಅಂಬಿಗೇರ ಓಣಿ, ದುರ್ಗಾ ಶಾಖೆ, ಕೊಪ್ಪ ದವಾಖಾನೆ, ಭವಾನಿ ಮಂದಿರ, ತರಕಾರಿ ಮಾರುಕಟ್ಟೆ, ಪೊಲೀಸ್ ಚೌಕ್, ಬಸವೇಶ್ವರ ವೃತ್ತ, ಸಾಸನೂರ ಪೆಟ್ರೋಲ್ ಬಂಕ್, ಬಸ್ ನಿಲ್ದಾಣ ರಸ್ತೆ ಮೂಲಕ ರೇಣುಕಾಚಾರ್ಯ ಮಂಗಳ ಭವನ ತಲುಪಿತು.
ಇನ್ನೊಂದು ಪಥ ಸಂಚಲನವು ಹಳಪೇಟ ಕುಂಬಾರದಿಂದ ಆರಂಭವಾಗಿ ಗಜಾನನ ಚೌಕ್, ಬಸವೇಶ್ವರ ದೇವಸ್ಥಾನ, ಅಂಬಿಗೇರ ಓಣಿ, ದೊಡ್ಡಸಾಬಣ್ಣನ ಓಣಿ, ಕಾಲೇಜು ರಸ್ತೆ, ಪಶು ಆಸ್ಪತ್ರೆ, ಲಕ್ಷ್ಮೀ ಗುಡಿ, ಚರಂತಿಮಠ ಕ್ರಾಸ್, ಸಾಸನೂರ ಪೆಟ್ರೋಲ್ ಪಂಪ್, ಬಸ್ ನಿಲ್ದಾಣ ರಸ್ತೆ ಮೂಲಕ ರೇಣುಕಾಚಾರ್ಯ ಮಂಗಳ ಭವನ ತಲುಪಿತು. ಘೋಷನಾದದ ನಡುವೆ ಏಕಕಾಲಕ್ಕೆ ಎರಡು ಸಂಚಲನಗಳು ನಿಗತ ಸಮಯಕ್ಕೆ ಮರಳಿ ಮೈದಾನ ತಲುಪಿದವು. ವಿದ್ಯಾಗಿರಿಯಲ್ಲಿ ಪ್ರತ್ಯೇಕ ಪಥ ಸಂಚಲನ:ವಿದ್ಯಾಗಿರಿ ಸೀತಾ ಮಾತಾ ಶಾಖೆ ವತಿಯಿಂದ ವೀರಾಂಬಿಕಾ ಶಾಲೆಯಿಂದ ಶುರುವಾದ ಪಥ ಸಂಚಲನ, 6 ನೇ ಅಡ್ಡ ರಸ್ತೆ, 7,8,9 ಅಡ್ಡ ರಸ್ತೆ, ಬಿವಿವಿ ಕಾಲೇಜು ರಸ್ತೆ, ಶಂಕರ ಮೇಲ್ನಾಡ್ ವೃತ್ತ, ಪೈ ಮೊಬೈಲ್ಸ್, 20,21, 22 ನೇ ರಸ್ತೆ ಮೂಲಕ ಕೆಂಚಮ್ಮ ದೇವಿದೇವಸ್ಥಾನ ತಲುಪಿ ಮುಕ್ತಾಯಗೊಂಡಿತು.