ವಾರ್ಷಿಕ ಮಹೋತ್ಸವಕ್ಕೆ ಸಿದ್ಧಗೊಂಡ ಅತ್ತೂರು ಬಸಿಲಿಕಾ

| Published : Jan 17 2025, 12:45 AM IST

ವಾರ್ಷಿಕ ಮಹೋತ್ಸವಕ್ಕೆ ಸಿದ್ಧಗೊಂಡ ಅತ್ತೂರು ಬಸಿಲಿಕಾ
Share this Article
  • FB
  • TW
  • Linkdin
  • Email

ಸಾರಾಂಶ

ಏಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲಾರೆನ್ಸರ ಮೂರ್ತಿಯನ್ನು ಬಸಿಲಿಕಾದ ಬಲಬದಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲಾರೆನ್ಸರ ಪ್ರತಿಮೆ ಇಟಲಿಯ ರೋಮ್ ಪ್ರಾಂತ್ಯದಲ್ಲಿ ಹಾಗೂ ಅತ್ತೂರು ಬಸಿಲಿಕಾದಲ್ಲಿ ಬಿಟ್ಟರೆ ಬೇರೆಲ್ಲೂ ಕಾಣಸಿಗುವುಸಿಲ್ಲ ಎಂದು ಬಸಿಲಿಕಾದ ಧರ್ಮಗುರು ಆಲ್ಬನ್ ಡಿಸೋಜ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಸಂತ ಲೋರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವ ಜ.26ರಿಂದ 30ರ ವರೆಗೆ ನಡೆಯಲಿದೆ. ಈ ಬಗ್ಗೆ ಎಲ್ಲ ಪೂರ್ವಭಾವಿ ಸಿದ್ಧತೆಗಳು ನಡೆದಿದ್ದು, ಬಸಿಲಿಕಾದ ವತಿಯಿಂದ ವಾರ್ಷಿಕ ಮಹೋತ್ಸವದ ಆಚರಣೆಗೆ ಸನ್ನದ್ಧರಾಗಿದ್ದೇವೆ ಎಂದು ಬಸಿಲಿಕಾದ ಧರ್ಮಗುರು ಆಲ್ಬನ್ ಡಿಸೋಜ ಹೇಳಿದರು.

ಅವರು ಗುರುವಾರ ಅತ್ತೂರು ಚರ್ಚ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಜ.26ರಂದು ಮಕ್ಕಳಿಗಾಗಿ ಪೂಜೆ ಹಾಗೂ ವಿಶೇಷ ಪ್ರಾರ್ಥನೆ, 27ರಂದು ಅಸ್ವಸ್ಥರಿಗಾಗಿ ಮೂರು ವಿಶೇಷ ಪೂಜೆ, ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಕೊಂಕಣಿ ಭಾಷೆಯಲ್ಲಿ 31 ಹಾಗೂ ಕನ್ನಡ ಭಾಷೆಯಲ್ಲಿ 7 ಹೀಗೆ ಒಟ್ಟು 38 ದಿವ್ಯ ಪೂಜೆಗಳನ್ನು ಅರ್ಪಿಸಲಾಗುವುದು. ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಬೆಳ್ತಂಗಡಿ, ಬಾರಯಿಪುರ್, ಮಂಗಳೂರು ಮತ್ತು ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಹಾಗೂ ಶ್ರೇಷ್ಠ ಗುರುಗಳು ಆಗಮಿಸಿ ದಿವ್ಯ ಪೂಜೆಯನ್ನು ಅರ್ಪಿಸುವರು ಎಂದರು.ಕಾನೂನು ಮತ್ತು ಶಿಸ್ತು ಪಾಲನೆಗಾಗಿ ಗರಿಷ್ಟ ಸಂಖ್ಯೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಯಾತ್ರಾರ್ಥಿಗಳ ವಾಹನಗಳ ನಿಲುಗಡೆಯ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ಗೃಹರಕ್ಷದಳ ಹಾಗೂ ಇತರ ಸಿಬ್ಬಂದಿ ನಿರ್ವಹಿಸಲಿರುವರು ಎಂದು ಹೇಳಿದರು.

ವೆಹಿಕಲ್ ಪಾಸ್ ಹೊಂದಿದ ವಾಹನಗಳು, ನಿಲುಗಡೆ ಮಾಡಿದ ವಾಹನಗಳಿಗೆ ನಿಲುಗಡೆ ಸ್ಥಳದಿಂದ ಮುಂದೆ ಸಾಗಿ ಏಕಮುಖ ಕಾಂಕ್ರಿಟ್ ರಸ್ತೆಯ ಮೂಲಕ ಕಾರ್ಕಳ-ಪಡುಬಿದ್ರಿ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ. ಪೊಲೀಸ್ ಸಿಬ್ಬಂದಿ ವಾಹನಗಳಿಗೆ ಹಾಗೂ ತುರ್ತು ಚಿಕಿತ್ಸಾ ವಾಹನಗಳಿಗೆ ಬಿಟ್ಟರೆ ಬೇರೆ ಯಾವುದೇ ವಾಹನಗಳಿಗೆ ಬಸಿಲಿಕಾದ ವಠಾರಕ್ಕೆ ಪ್ರವೇಶವಿಲ್ಲ ಎಂದರು.ಬಸಿಲಿಕಾದ ವಠಾರದಲ್ಲಿ ಅಧಿಕೃತ ಸ್ಟಾಲ್‌ನಲ್ಲಿ ಮಾತ್ರ ಮೊಂಬತ್ತಿ ಮಾರಾಟ ಮಾಡಲು ಅವಕಾಶ ಮಾಡಲಾಗಿದೆ. ಇತರರಿಗೆ ಬಸಿಲಿಕಾ ವಠಾರದಲ್ಲಿ ಮೊಂಬತ್ತಿ ಮಾರಾಟ ಮಾಡಲು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಜ.27ರಂದು ಸಂಜೆ 8ರಿಂದ ಬಸಿಲಿಕಾ ವಠಾರದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಜಿ.ಕೆ. ಶ್ರೀನಿವಾಸ್ ಸಾಲ್ಯಾನ್ ವಿರಚಿತ ಸಂತ ಲೋರೆನ್ಸರ ಮಹಾತ್ಮೆ ಎಂಬ ಕನ್ನಡ ಯಕ್ಷಗಾನ ಪ್ರಸಂಗ ನಡೆಯಲಿದೆ ಎಂದರು.

ಏಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲಾರೆನ್ಸರ ಮೂರ್ತಿಯನ್ನು ಬಸಿಲಿಕಾದ ಬಲಬದಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲಾರೆನ್ಸರ ಪ್ರತಿಮೆ ಇಟಲಿಯ ರೋಮ್ ಪ್ರಾಂತ್ಯದಲ್ಲಿ ಹಾಗೂ ಅತ್ತೂರು ಬಸಿಲಿಕಾದಲ್ಲಿ ಬಿಟ್ಟರೆ ಬೇರೆಲ್ಲೂ ಕಾಣಸಿಗುವುಸಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಸಿಲಿಕಾದ ಸಹಾಯಕ ಧರ್ಮಗುರು ಲ್ಯಾರಿ ಪಿಂಟೊ, ಆಧ್ಯಾತ್ಮಿಕ ನಿರ್ದೇಶಕರಾದ ರೋಮನ್ ಮಸ್ಕರೇನ್ಹಸ್, ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೋನ್ಹಾ ಹಾಗೂ ಇತರರು ಉಪಸ್ಥಿತರಿದ್ದರು.