ಸಾರಾಂಶ
- ಚನ್ನಗಿರಿ ಪುರಸಭೆ ಸಾಮಾನ್ಯ ಸಭೆ ಒಪ್ಪಿಗೆ । ಶಾಸಕರ ಸಲಹೆಗೆ ಸದಸ್ಯರ ಮಧ್ಯೆ ಚರ್ಚೆ ಬಳಿಕ ನಿರ್ಧಾರ
- - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಮುಖ್ಯ ಬಸ್ ನಿಲ್ದಾಣವನ್ನು ₹1.30 ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸುತ್ತಿದೆ. ಈ ಕಾಮಗಾರಿ ಶೀಘ್ರದಲ್ಲಿಯೇ ಆರಂಭಗೊಂಡು 2 ರಿಂದ 3 ತಿಂಗಳಿನಲ್ಲಿ ಕೆಲಸ ಮುಕ್ತಾಯವಾಗಲಿದೆ. ಅಲ್ಲಿಯ ತನಕ ಬಸ್ ನಿಲ್ದಾಣದಲ್ಲಿ ಬರುವ ಬಸ್‌ಗಳ ನಿಲುಗಡೆಯ ಸ್ಟಾಂಡ್ ಫೀ ಶುಲ್ಕದ ಹರಾಜನ್ನು ಮಾಡಬೇಡಿ. ಈ ಹಿಂದೆ ಶುಲ್ಕವನ್ನು ವಸೂಲಿ ಮಾಡುತ್ತಿದ್ದ ಬಿಡ್‌ದಾರರಿಗೆ 3 ತಿಂಗಳ ಕಾಲ ಫೀ ವಸೂಲಾತಿಗೆ ಅವಕಾಶ ನೀಡಿರಿ ಎಂದು ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.ಸೋಮವಾರ ಪುರಸಭೆ ಸಾಮಾನ್ಯ ಸಭೆಯಲ್ಲಿ ಸಲಹೆಗಳ ನೀಡಿದರು. ಆಗ ಈ ಬಗ್ಗೆ ಸದಸ್ಯರಾದ ಗೌಸ್ ಪೀರ್, ನಿಂಗಪ್ಪ, ಪಟ್ಲಿನಾಗರಾಜ್, ನಂಜುಂಡಪ್ಪ, ಪಾರಿ ಪರಮೇಶ್, ಗಾದ್ರಿ ರಾಜು, ಹಾಲೇಶ್ ಮಾತನಾಡಿ, ಬಸ್ ನಿಲ್ದಾಣದ ಶುಲ್ಕ ಸಂಗ್ರಹದ ಹರಾಜು ಮಾಡಬೇಕು ಅಥವಾ ಬೇಡ ಎಂಬ ಬಗ್ಗೆ ಚರ್ಚೆ ನಡೆಸಿದರು. ಅಂತಿಮವಾಗಿ ಮಾರ್ಚ್ 31ಕ್ಕೆ ಶುಲ್ಕ ಸಂಗ್ರಹಿಸುವ ಅವಧಿ ಮುಗಿಯಲಿದೆ. ಏ.1ರಿಂದ ಶುಲ್ಕ ಸಂಗ್ರಹಿಸುತ್ತಿರುವ ಬಿಡ್‌ದಾರರಿಗೆ ಬಸ್ ನಿಲ್ದಾಣ ಅಧುನೀಕರಣವಾಗುವ 3 ತಿಂಗಳವರೆಗೆ ಮಾತ್ರ ತಿಂಗಳಿಗೆ ₹25 ಸಾವಿರವನ್ನು ಪುರಸಭೆಗೆ ಕಟ್ಟಲಿ. ಆಧುನೀಕರಣವಾದ ನಂತರ ಹರಾಜು ಪ್ರಕ್ರಿಯೆ ನಡೆಸೋಣ ಎಂಬ ಕರಾರಿನ ಮೇರೆಗೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಶೇ.3 ಕಂದಾಯ ಏರಿಕೆ:ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ಸಭೆಗೆ ಮಾಹಿತಿ ನೀಡುತ್ತಾ, ಪಟ್ಟಣ ವ್ಯಾಪ್ತಿಯ ಕಟ್ಟಡ ಮತ್ತು ನಿವೇಶನಗಳ ಆಸ್ತಿ ತೆರಿಗೆಯನ್ನು ಪರಿಷ್ಕರಣೆ ಮಾಡಬೇಕೆಂದು ಸರ್ಕಾರ ಸೂತ್ತೋಲೆ ನೀಡಿದೆ. ಅದರಂತೆ ತೆರಿಗೆ ಕಂದಾಯವನ್ನು ಜಾಸ್ತಿ ಮಾಡುವ ವಿಚಾರವನ್ನು ಸಭೆ ಗಮನಕ್ಕೆ ತಂದರು. ಆಗ ಈ ಬಗ್ಗೆ ಕೂಲಂಕಶ ಚರ್ಚೆ ನಡೆಯಿತು. ಕಂದಾಯವನ್ನು ಜಾಸ್ತಿ ಮಾಡುವುದು ಬೇಡ ಎಂಬ ವಾದವನ್ನು ಸದಸ್ಯರು ಮಂಡಿಸಿದರು. ಆಗ ಮುಖ್ಯಾಧಿಕಾರಿ ಅವರು, ಸರ್ಕಾರದ ಆದೇಶದ ಪ್ರಕಾರವಾಗಿ ಕಂದಾಯ ಜಾಸ್ತಿ ಮಾಡದಿದ್ದರೆ ಸರ್ಕಾರದ ಯಾವುದೇ ಅನುದಾನಗಳು ಪುರಸಭೆಗೆ ಬರುವುದಿಲ್ಲ. ಮತ್ತು ಸರ್ಕಾರದ ಆದೇಶ ನಾವೆಲ್ಲರೂ ಪಾಲನೆ ಮಾಡಬೇಕೆಂದು ವಿವರವಾಗಿ ತಿಳಿಸಿದರು. ಅಂತಿಮವಾಗಿ ಹಾಲಿ ಇರುವ ಕಂದಾಯದ ಮೇಲೆ ಶೇ.3ರಷ್ಟನ್ನು ಹೆಚ್ಚಿಗೆ ಮಾಡಲು ಸಭೆ ಒಪ್ಪಿಗೆ ಸೂಚಿಸಿತು.
ಪಟ್ಟಣದಲ್ಲಿ ಕಂದಾಯ ಭೂಮಿಯಲ್ಲಿ ಇರುವ ಅನಧಿಕೃತ ಸ್ವತ್ತುಗಳಿಗೆ ಖಾತೆ ಸಂಖ್ಯೆ ನೀಡುವಲ್ಲಿ ಅಧಿಕೃತವಾಗಿ ಬೇಕಾದ ದಾಖಲೆಗಳನ್ನು ಪಡೆದು ಖಾತೆ ಸಂಖ್ಯೆ ನೀಡಿರಿ. ಇದೇ ಪುರಸಭೆಯಿಂದ ಮೊದಲು ಎ ಖಾತೆ ನೀಡಿ, ಈಗ ಬಿ ಖಾತೆ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳುವುದು ಸರಿಯಲ್ಲ ಎಂದು ಸದಸ್ಯರಾದ ಅಮೀರ್ ಅಹಮ್ಮದ್, ಶಿವಾಜಿರಾವ್, ಜಿತೇಂದ್ರರಾಜ್, ನಟರಾಜ್ ಆಕ್ಷೇಪಿಸಿದರು.ಸಭೆಯಲ್ಲಿ ಪುರಸಭೆಯ ನೀರು ಸರಬರಾಜು ಕೇಂದ್ರಕ್ಕೆ 18 ಜನ ಸಹಾಯಕರನ್ನು ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಸಭೆ ತೀರ್ಮಾನಿಸಿತು. ಕಳೆದ ಫೆಬ್ರವರಿ ತಿಂಗಳಿನ ಜಮಾ-ಖರ್ಚುಗಳನ್ನು ಸಭೆಯಲ್ಲಿ ಮಂಡಿಸಲಾಯಿತು.
ಸಭೆ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ ವಹಿಸಿದ್ದರು. ಉಪಾಧ್ಯಕ್ಷ ಸರ್ವಮಂಗಳ, ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ವ್ಯವಸ್ಥಾಪಕ ಆರಾಧ್ಯ, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಕಚೇರಿ ಸಿಬ್ಬಂದಿ ಹಾಜರಿದ್ದರು.- - - -24ಕೆಸಿಎನ್ಜಿ1.ಜೆಪಿಜಿ:
ಪುರಸಭೆಯ ಸಾಮಾನ್ಯಸಭೆಯು ಪುರಸಭೆಯ ಅಧ್ಯಕ್ಷೆ ಲಕ್ಷ್ಮಿದೇವಮ್ಮನರಸಿಂಹಮೂರ್ತಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು, ಉಪಾಧ್ಯಕ್ಷೆ ಸರ್ವಮಂಗಳ, ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ ಇದ್ದಾರೆ.