ಅರಮನೆಯಲ್ಲಿ ವಿಜಯ್ ಪ್ರಕಾಶ್ ಗಾಯನಕ್ಕೆ ಪ್ರೇಕ್ಷಕರು ಜೈಹೋ

| Published : Sep 29 2025, 01:02 AM IST

ಸಾರಾಂಶ

ಹಲೋ ಹಲೋ ನನ್ನ ಮನಸ್ಸು ಇಲ್ಲೆ ಎಲ್ಲೋ..., ಒಪನ್ ಹೇರ್ ಬಿಟ್ಕೊಂಡು ಕೂದಲು ಹಾರಾಡ್ಸ್ಕೊಂಡು.., ಸಿಂಗಾರ ಸಿರಿಯೇ.., ಬೆಳಗೆದ್ದು ಯಾರ ಮುಖವ ನಾನು ನೋಡಿದೆ... ಮೊದಲಾದ ಜನಪ್ರಿಯ ಹಾಡುಗಳನ್ನು ಹಾಡಿ ಪ್ರೇಕ್ಷಕರು ಕುಣಿಯುವಂತೆ ಮಾಡಿದರು.

ಬಿ. ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ನಾಡಹಬ್ಬ ಮಹೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾನುವಾರ ನಾದಲಹರಿ, ಗಾನಸುಧೆ, ನೃತ್ಯವೈಭವವು ಪ್ರೇಕ್ಷಕರ ಮನಮೋಹಿಸಿತು.

ಮೈಸೂರು ಅರಮನೆ ಮುಂಭಾಗದ ವೇದಿಕೆಯಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮದ ಮೂಲಕ ಗಾನಸುಧೆ ಹರಿಸಿದರು. ಚಾಮುಂಡೇಶ್ವರಿ ಶಂಕರಿ ಕೀರ್ತನೆಯೊಂದಿಗೆ ಹಾಡಲು ಆರಂಭಿಸಿದ ವಿಜಯ್ ಪ್ರಕಾಶ್ ಅವರು, ಸಹ ಗಾಯಕರೊಂದಿಗೆ ಹಬ್ಬ... ಹಬ್ಬ... ಇದು ಕರಡುನಾಡ ಮನೆ ಮನೆ ಹಬ್ಬ... ಹಾಡುವ ಮೂಲಕ ದಸರಾ ಹಬ್ಬಕ್ಕೆ ಮೆರುಗು ಹೆಚ್ಚಿಸಿದರು.

ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ...ಹಾಡಿಗೆ ಪ್ರೇಕ್ಷಕರೆಲ್ಲ ತಮ್ಮ ಮೊಬೈಲ್ ಕ್ಯಾಮರಾ ಟಾರ್ಚ್ ಹೊಲಾಡಿಸಿ ಧ್ವನಿಗೂಡಿಸಿ ಹಾಡಿ ನಟ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದರು.

ಹಲೋ ಹಲೋ ನನ್ನ ಮನಸ್ಸು ಇಲ್ಲೆ ಎಲ್ಲೋ..., ಒಪನ್ ಹೇರ್ ಬಿಟ್ಕೊಂಡು ಕೂದಲು ಹಾರಾಡ್ಸ್ಕೊಂಡು.., ಸಿಂಗಾರ ಸಿರಿಯೇ.., ಬೆಳಗೆದ್ದು ಯಾರ ಮುಖವ ನಾನು ನೋಡಿದೆ... ಮೊದಲಾದ ಜನಪ್ರಿಯ ಹಾಡುಗಳನ್ನು ಹಾಡಿ ಪ್ರೇಕ್ಷಕರು ಕುಣಿಯುವಂತೆ ಮಾಡಿದರು.

ಪೃಥ್ವಿ ಭಟ್, ಶಾಶ್ವತಿ ಕಷ್ಯಪ್ ಮತ್ತು ಅಖಿಲಾ ಅವರು ಸೂಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಹಾಡನ್ನು ಹಾಡಿ ಪ್ರೇಕ್ಷಕರ ಮನಗೆದ್ದರು. ವಿಜಯ್ ಪ್ರಕಾಶ್ ಅವರು ಓಂ ಶಿವೋಂ ಹಂ.. ಓಂ ನಮಃ ಶಿವಾಯ ಎಂದು ಶಿವನ ಸ್ತುತಿಯನ್ನು ಸ್ವರ ಸಲ್ಲಾಪಗಳ ಮೂಲಕ ಹಾಡಿದರು. ಅಲ್ಲದೆ, ಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪ..., ಜೈಹೋ..ಜೈಹೋ... ಹಾಡನ್ನು ಹಾಡಿದರು.

ಇದಕ್ಕೂ ಮುನ್ನ ಡಾ. ರಾಗಿಣಿ ತಂಡದ ಭಜನ್ ಸಂಗೀತ, ಎಸ್. ಭುವನೇಶ್ವರಿ ವೆಂಕಟೇಶ್ ತಂಡದ ಸುಗಮ ಸಂಗೀತ, ಭೂಮ್ತಾಯಿ ಬಳಗದ ಪರಿವರ್ತನಾ ಗೀತೆಗಳನ್ನು ಹಾಡಿದರು. ಅಂತಿಮವಾಗಿ ಪದ್ಮಶ್ರೀ ಡಾ. ಪದ್ಮಜಾ ರೆಡ್ಡಿ ತಂಡವು ಪ್ರಸ್ತುತಪಡಿಸಿದ ನವದುರ್ಗಾ- ಕೂಚುಪುಡಿ ನೃತ್ಯವು ನೋಡುಗರನ್ನು ರಂಜಿಸಿತು.

ಭಾನುವಾರ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಸಾವಿರಾರು ಪ್ರೇಕ್ಷಕರು ನೆರೆದಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಸಂಭ್ರಮಿಸಿದರು.

ವಿವಿಧೆಡೆ ಸಾಂಸ್ಕೃತಿಕ ಸಂಭ್ರಮ

ಜಗನ್ಮೋಹನ ಅರಮನೆಯಲ್ಲಿ ಚಿಟ್ಟಿಮೇಳ, ಭರತನಾಟ್ಯ, ವಚನ ಗಾಯನ, ಸುಗಮ ಸಂಗೀತ, ಕಲಾಮಂದಿರದಲ್ಲಿ ಪೂಜಾ ಕುಣಿತ, ಸಮೂಹ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಮಹಾನಾಯಕ ಸಾಮ್ರಾಜ್ ಅಶೋಕ್- ನಾಟಕ, ಕಿರು ರಂಗಮಂದಿರದಲ್ಲಿ ಹರಕೆಯ ಕುರಿ ನಾಟಕ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಮುಪ್ಪು ನಾಟಕ ಮತ್ತು ನಿರಾಕರಣೆ ನಾಟಕ ಪ್ರದರ್ಶನವಾಯಿತು.

ಕುವೆಂಪುನಗರದ ಗಾನಭಾರತಿ ವೇದಿಕೆಯಲ್ಲಿ ಸೋಬಾನೆ ಪದ, ಜಾನಪದ ಗಾಯನ, ಭರತನಾಟ್ಯ, ಸುಗಮ ಸಂಗೀತ, ಜೆಎಲ್ ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತಸಭಾದಲ್ಲಿ ನವದುರ್ಗಿ ಮಹಾತ್ಮೆ ನೃತ್ಯರೂಪಕ, ಜಾನಪದ ಗಾಯನ, ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತವು ಗಮನ ಸೆಳೆಯಿತು.

ಚಿಕ್ಕಗಡಿಯಾರ ವೇದಿಕೆಯಲ್ಲಿ ಡೊಳ್ಳು ಕುಣಿತ, ಜನಪದ ಗಾಯನ, ತತ್ವಪದ ಗಾಯನ, ರಾಧಾನಾಟ- ಸಣ್ಣಾಟ ಜರುಗಿತು. ಪುರಭವನದಲ್ಲಿ ರಕ್ತರಾತ್ರಿ- ಪೌರಾಣಿಕ ನಾಟಕ, ಕುರುಕ್ಷೇತ್ರ- ನಾಟಕ ಹಾಗೂ ಕುರುಕ್ಷೇತ್ರ ಪೌರಾಣಿಕ ನಾಟಕವು ಪ್ರೇಕ್ಷಕರನ್ನು ರಂಜಿಸಿತು.

ರಮಾಗೋವಿಂದ ರಂಗಮಂದಿರದಲ್ಲಿ ನಾದಸ್ವರ, ಭರತನಾಟ್ಯ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ನೃತ್ಯರೂಪಕ ಹಾಗೂ ಮಾಯಾ ನಾಟಕ ಪ್ರದರ್ಶನವಾಯಿತು.