ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಶಿರಚ್ಛೇದ ಮಾಡುವ ಕುರಿತು ಹರಿದಾಡುತ್ತಿರುವ ಆಡಿಯೋ ಹಾಗೂ ಈಗ ಹರಿದಾಡಿದ ವಿಡಿಯೋಗೂ ನಮಗೂ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಸ್ಪಷ್ಟಪಡಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ್ ಕಾಯ್ದೆ ತಿದ್ದುಪಡಿ ಖಂಡಿಸಿ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಡೆ ಖಂಡಿಸಿ ಏ.15ರಂದು ಪೂರ್ವಭಾವಿ ಸಭೆ ನಡೆಸಲಾಗುವುದು. ಅಂದು ಸಭೆಯಲ್ಲಿ ಏ.23, 24ರಂದು ಪ್ರತಿಭಟನೆ ನಡೆಸುವ ಕುರಿತು ಯೋಜನೆ ರೂಪಿಸಲಾಗುತ್ತದೆ. ಆದರೆ ಏ.15ರಂದೇ ಹೋರಾಟ ನಡೆಸುವ ಕುರಿತು ಆಡಿಯೋ ವೈರಲ್ ಆಗಿದ್ದು, ಆ ಕುರಿತು ನಾವು ಸಭೆಯನ್ನೇ ನಡೆಸಿಲ್ಲ. ಇನ್ನು ಈಗಾಗಲೇ ವೈರಲ್ ಆಗಿರುವ ಆಡಿಯೋ ಮತ್ತು ವಿಡಿಯೋಗಳ ಬಗ್ಗೆ ತನಿಖೆಯಾಗಲಿ ಎಂದರು.
ಯತ್ನಾಳ ಮುಗಿಸುವ ಕುರಿತು ಯಾರೋ ಕಿಡಿಗೇಡಿಗಳು ಆಡಿಯೋ ವೈರಲ್ ಮಾಡುತ್ತಿದ್ದಾರೆ. ಆದರೆ ಅದಕ್ಕೂ ನಮಗೂ ಸಂಬಂಧವಿಲ್ಲ. ಪೊಲೀಸರು ತನಿಖೆ ನಡೆಸಿ ಆ ಆಡಿಯೋ ಯಾರದ್ದು, ಇದರ ಹಿಂದೆ ಯಾರಿದ್ದಾರೆ ಎಂಬುದು ಕಂಡುಹಿಡಿಯಬೇಕು. ಇನ್ನು ಬಿಜೆಪಿಯಲ್ಲೂ ಒಂದಿಬ್ಬರು ಕಿಡಿಗೇಡಿಗಳು ಇದ್ದಾರೆ. ಅವರು ಯಾರೋ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಅದರ ಬಗ್ಗೆಯೂ ತನಿಖೆ ನಡೆಸಬೇಕಿದೆ ಎಂದು ಎಸ್‌ಪಿ ಹಾಗೂ ಡಿಸಿ ಅವರಿಗೆ ಒತ್ತಾಯಿಸಿದರು.ಯತ್ನಾಳಗೆ ಸವಾಲು:
ಮಾತೆತ್ತಿದರೆ ಮುಸ್ಲಿಂರಿಗೆ ಜನ್ನತಗೆ ಕಳಿಸುತ್ತೇನೆ ಎನ್ನುವ ಯತ್ನಾಳ ಅವರ ಹೆಸರಿನಲ್ಲಿ ಯಾರೋ ಪೋಸ್ಟ್ ಮಾಡಿದ್ದಾರೆ. ಯತ್ನಾಳ ಅವರೇ ನೀವು ನಿಮ್ಮ ಅಪ್ಪನಿಗೆ ಹುಟ್ಟಿದ್ದರೆ ಬಂದು ನನಗೆ ಹೊಡೆಯಿರಿ. ಅಥವಾ ನಿಮ್ಮ ಮಕ್ಕಳಿಗೆ ಕಳಿಸಿ ನನಗೆ ಹೊಡೆಸಿ. ಪಾಕಿಸ್ತಾನಗೆ ಹೋಗು ಅಂದ್ರೆ ಕರ್ನಾಟಕ, ವಿಜಯಪುರ ನಿಮ್ಮ ಅಪ್ಪಂದೇನು ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಪ್ರಶ್ನಿಸಿದರು.ತಾಲೂಕಿನ ಕಗ್ಗೊಡನಲ್ಲಿರುವ ಯತ್ನಾಳ ಅವರ ಗೋಶಾಲೆಯಿಂದ ಕಲಬುರಗಿಗೆ ಜಾನುವಾರುಗಳನ್ನು ಕಳಿಸಿ, ಕಸಾಯಿಖಾನೆಗೆ ಮಾರುತ್ತಾರೆ. ಆಕಳುಗಳ ಪೋಸ್ಟ್ ಮಾರ್ಟಂ ಮಾಡ್ತಾರೆ, ಅದರಿಂದ ಅವರಿಗೆ ಹಣ ಬರುತ್ತದೆ ಎಂದು ಆರೋಪಿಸಿದರು.
ಮಹಾನಗರ ಪಾಲಿಕೆಯವರು ಹಿಡಿಯುವ ಬೀಡಾಡಿ ಜಾನುವಾರುಗಳನ್ನು ಕಗ್ಗೋಡ ಗೋಶಾಲೆಗೆ ಕಳಿಸ್ತಾರೆ. ಆಕಳುಗಳು ಎಷ್ಟು ಕಳಿಸ್ತಾರೆ. ಆದರೆ ಅವುಗಳಲ್ಲಿ ಇದುವರೆಗೂ ಎಷ್ಟು ಬದುಕಿವೆ?, ಅವರು ಎಷ್ಟು ಮಾರಿಕೊಂಡಿದ್ದಾರೆ? ಎಂಬ ಲೆಕ್ಕ ಕೊಡಲಿ ಎಂದ ಅವರು, ಇನ್ನು ಯತ್ನಾಳ ವಿರುದ್ಧ ನಾವು ಏನೇ ಕೇಸ್ ದಾಖಲಿಸಿದರೂ ಯತ್ನಾಳರ ಒಡತನದಲ್ಲಿರುವ ಸಿದ್ಧಸಿರಿ ಸೌಹಾರ್ದದಿಂದ ಸಾಕಷ್ಟು ಹಣ ಬರುತ್ತಿದೆ. ಆ ಹಣವನ್ನು ಬಳಸಿ ಪ್ರಕರಣಗಳಿಗೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತರುತ್ತಿದ್ದಾರೆ ಎಂದರು.ಮುಖಂಡ ಎಂ.ಸಿ.ಮುಲ್ಲಾ ಮಾತನಾಡಿ, ನಿನ್ನೆ ಆಡಿಯೋ ವೈರಲ್ ಆಗಿದೆ. ಆದರೆ ಆ ವ್ಯಕ್ತಿಗೂ ನಮಗೂ ಸಂಬಂಧವಿಲ್ಲ. ಯಾರೋ ಒಬ್ಬರು ಕುತಂತ್ರ ಮಾಡಿದ್ದಾರೆ. ನಮ್ಮ ಹೋರಾಟ ವಕ್ಫ್ ವಿರುದ್ಧ ನಡೆಯಲಿದೆ. ಈ ಆಡಿಯೋ ಕುತಂತ್ರವನ್ನು ಬಸನಗೌಡರು ಹಾಗೂ ಅವರ ಅನುಯಾಯಿಗಳು ಸೇರಿ ಮಾಡಿರಬಹುದು. ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡರು ಈ ರೀತಿ ಏನಾದರೂ ಕುತಂತ್ರ ಮಾಡಿದರೆ ತಮ್ಮನ್ನು ಬಿಜೆಪಿಯವರು ಮತ್ತೆ ವಾಪಸ್ ಬಿಜೆಪಿಗೆ ತೆಗೆದುಕೊಳ್ಳಬೇಕು ಎಂದು ಸಿಂಪತಿಗಾಗಿ ತಂತ್ರಗಾರಿಕೆ ಮಾಡಿರಬೇಕು. ಬಿಜೆಪಿ ಹೈಕಮಾಂಡ್‌ಗೆ ಗಮನ ಸೆಳೆಯಲು ಹೀಗೆ ಮಾಡಿರಬೇಕು ಎಂದರು.
ಮುಖಂಡ ಅಬ್ದುಲ್ ರಜಾಕ ಹೊರ್ತಿ, ಮಹಮ್ಮದ ರಫೀಕ್ ಟಪಾಲ್ ಮಾತನಾಡಿದರು. ಫಯಾಜ್ ಕಲಾದಗಿ ಉಪಸ್ಥಿತರಿದ್ದರು.