ಸಾರಾಂಶ
ಕಾವ್ಯ ಸುರಭಿ ಕವನ ಸಂಕಲನದಲ್ಲಿ ಅನೇಕ ಬಗೆ ವೈಶಿಷ್ಟ್ಯಗಳಿವೆ. ಬದುಕಿನ ಬಹುಮುಖ್ಯತೆಯನ್ನು ಹಿಡಿದಿದೆ
-
ಕನ್ನಡಪ್ರಭ ವಾರ್ತೆ ಮೈಸೂರುಪ್ರಸ್ತುತ ಸಾಹಿತ್ಯದಲ್ಲಿ ಭಾಷೆ ಶುದ್ಧತೆ ಕಳೆದುಕೊಳ್ಳುತ್ತಿದೆ. ಛಂದಸ್ಸಿನ ಬಳಕೆ ಕ್ಷೀಣಿಸುತ್ತಿದೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ವಿಷಾದಿಸಿದರು.
ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಆರ್. ರಂಗಸ್ವಾಮಿಶಾಂತ ಅವರ ‘ಕಾವ್ಯ ಸುರಭಿ’ ಎಂಬ ಕವನ ಸಂಕಲನವನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.ರಂಗಸ್ವಾಮಿಶಾಂತ ಅವರ ಕವನ ಸಂಕಲನ ಭಾಷೆ ಶುದ್ಧತೆಯೊಂದಿಗೆ ಮಾನವೀಯ ನೆಲೆಗಟ್ಟು, ಹೃದಯವಂತಿಕೆಯನ್ನು ಬೆಳಸಲಿದೆ. ಕಾವ್ಯ ಸುರಭಿ ಕವನ ಸಂಕಲನದಲ್ಲಿ ಅನೇಕ ಬಗೆ ವೈಶಿಷ್ಟ್ಯಗಳಿವೆ. ಬದುಕಿನ ಬಹುಮುಖ್ಯತೆಯನ್ನು ಹಿಡಿದಿದೆ. ಒಂದು ಕಡೆ ಭೂಮಿ, ಆಕಾಶ, ಅಧ್ಯಾತ್ಮ, ಲೌಕಿಕ ಹೀಗೆ ಬದುಕಿನ ವೈವಿಧ್ಯವನ್ನು ಕಾವ್ಯ ಉಣಬಡಿಸಲಿದೆ ಎಂದು ಅವರು ಹೇಳಿದರು.
ಆಧುನೀಕ ಕನ್ನಡ ಸಾಹಿತ್ಯದ ನವೋದಯ ಕಾವ್ಯ ಪಂಥಕ್ಕೆ ಈ ಕವನ ಸಂಕಲನ ಸೇರಲಿದೆ. ಸರಳ ಸುಂದರ ಪದಗಳ ಮೂಲಕ ಅನುಭವದ ಸಮೃದ್ಧಿ ಇಲ್ಲಿನ ಕವನಗಳಲ್ಲಿದ್ದು, ಏನನ್ನು ಬಿಡದೆ ತಮ್ಮ ತೆಕ್ಕೆ ತೆಗೆದುಕೊಂಡು ಎಲ್ಲಾ ಪ್ರಕಾರಗಳನ್ನು ಲೇಖಕರು ಸ್ಪರ್ಶಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.ಕೃತಿ ಕುರಿತು ಸಾಹಿತಿ ಎ.ಎಸ್. ವಾಣಿ ಸುಬ್ಬಯ್ಯ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಭಾರತೀ ಪ್ರಕಾಶನದ ಬಿ.ಎನ್. ಶ್ರೀನಿವಾಸ, ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಜಿ.ಆರ್. ಅರಸ್, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ರತ್ನ ಹಾಲಪ್ಪಗೌಡ, ಮ.ನ. ಲತಾ ಮೋಹನ್, ಡಿ. ಈರೇಶ್ ನಗರ್ಲೆ ಮೊದಲಾದವರು ಇದ್ದರು.