ಅಧಿಕಾರಿಗಳು ರೈತರ ಹಲವು ಸಮಸ್ಯೆ ಬಗೆಹರಿಸಿಲ್ಲ: ರೈತ ಮುಖಂಡ ಮುದುಗೆರೆ ರಾಜೇಗೌಡ ಆರೋಪ

| Published : Jun 27 2024, 01:02 AM IST

ಅಧಿಕಾರಿಗಳು ರೈತರ ಹಲವು ಸಮಸ್ಯೆ ಬಗೆಹರಿಸಿಲ್ಲ: ರೈತ ಮುಖಂಡ ಮುದುಗೆರೆ ರಾಜೇಗೌಡ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಬಡ ರೈತರಿಗೆ ಕೃಷಿ ಇಲಾಖೆಯಲ್ಲಿ ಬಾಡಿಗೆಗೆ ಸಲ್ಲಬೇಕಿದ್ದ ಕೃಷಿ ಉಪಕರಣ ನೀಡುತ್ತಿಲ್ಲ. ತೋಟಗಾರಿಕೆ ಇಲಾಖೆ ಅಕ್ಕಿಮಂಚನಹಳ್ಳಿ ಬೋರಮ್ಮರಿಗೆ ಸಬ್ಸಿಡಿಯಲ್ಲಿ ಟ್ರಾಕ್ಟರ್ ಖರೀದಿಸಿದ್ದಾರೆ. ಆದರೆ, ಸ್ಥಳೀಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸಬ್ಸಿಡಿ ಕಲ್ಪಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಳೆದ ಜನಸಂಪರ್ಕ ಸಭೆಯಲ್ಲಿ ತಾಲೂಕಿನ ಹಲವು ಸಮಸ್ಯೆಗಳ ಬಗ್ಗೆ ಮನವಿ ಮಾಡಲಾಗಿತ್ತು. ಆದರೆ, ಇದುವರೆಗೂ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂದು ರೈತ ಸಂಘದ ಹಿರಿಯ ಮುಖಂಡ ಮುದುಗೆರೆ ರಾಜೇಗೌಡ ಹೇಳಿದರು.

ಜನಸ್ಪಂದನಾ ಸಭೆಯಲ್ಲಿ ಮಾತನಾಡಿದ ಅವರು ಸಾರ್ವಜನಿಕರು ಮತ್ತು ಜಾನುವಾರುಗಳ ರಕ್ಷಣೆಗಾಗಿ ತಾಲೂಕಿನಲ್ಲಿರುವ ಪ್ರತಿ ನಾಲೆಗಳಿಗೆ ರಕ್ಷಣಾ ಕಲ್ಲು ಅಳವಡಿಸಿ ಎಂದು ಮನವಿ ಮಾಡಿದರು.

ಸರ್ಕಾರ ಬಡ ರೈತರಿಗೆ ಕೃಷಿ ಇಲಾಖೆಯಲ್ಲಿ ಬಾಡಿಗೆಗೆ ಸಲ್ಲಬೇಕಿದ್ದ ಕೃಷಿ ಉಪಕರಣ ನೀಡುತ್ತಿಲ್ಲ. ತೋಟಗಾರಿಕೆ ಇಲಾಖೆ ಅಕ್ಕಿಮಂಚನಹಳ್ಳಿ ಬೋರಮ್ಮರಿಗೆ ಸಬ್ಸಿಡಿಯಲ್ಲಿ ಟ್ರಾಕ್ಟರ್ ಖರೀದಿಸಿದ್ದಾರೆ. ಆದರೆ, ಸ್ಥಳೀಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸಬ್ಸಿಡಿ ಕಲ್ಪಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಎಂದು ಚಳುವಳಿ ನಡೆಸಿದರು ಅಧಿಕಾರಿಗಳು ಆತನ ವಿರುದ್ಧ ಶಿಸ್ತು ಕ್ರಮ ಜರುಗಿಸಿಲ್ಲ ಎಂದು ದೂರಿದರು.

ಬೂಕನಕೆರೆ ಗ್ರಾಮದ ಸಾರ್ವಜನಿಕ ಆಸ್ಪತ್ರೆ ವೈದ್ಯರ ಕೊರತೆ ಹಾಗೂ ಕೊಠಡಿಗಳು ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತಿದೆ. ಬಣ್ಣೇನಹಳ್ಳಿ ಬಳಿಯ ಮೆಗಾ ಫುಡ್ ಪಾರ್ಕ್ ಕಾರ್ಖಾನೆಗಳ ತ್ಯಾಜ್ಯ ನೀರು ಹಾಗೂ ಘನ ತ್ಯಾಜ್ಯವನ್ನು ಸಂಸ್ಕರಣೆ ಮಾಡದೇ ರೈತರ ಜಮೀನಿಗೆ ಹಾಗೂ ಕೆರೆ ಕಟ್ಟೆಗಳಿಗೆ ನೇರವಾಗಿ ಬಿಡಲಾಗುತ್ತಿದೆ. ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದರು.

ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯ ಒಟ್ಟು ಮೌಲ್ಯ ಮತ್ತು ವಾರ್ಷಿಕ ಆದಾಯ ಆದರಿಸಿ ಕಂದಾಯ ಸ್ವೀಕರಿಸದೆ ಕಾರ್ಖಾನೆ ಅಣತಿಗೆ ಅನುಗುಣವಾಗಿ ಕಂದಾಯ ಸ್ವೀಕರಿಸಿ ಮಾಕವಳ್ಳಿ ಗ್ರಾಪಂ ಪಿಡಿಓ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಕೂಡಲೇ ಕಠಿಣ ಕ್ರಮ ಜರುಗಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಅರ್ಧಕ್ಕೆ ನಿಂತಿರುವ ಹೊಸಹೊಳಲು ಕೆರೆ ಮೇಲ್ಗಾಲುವೆ ಕಾಮಗಾರಿ ಪೂರ್ಣಗೊಳಿಸಬೇಕು. ಐಚನಹಳ್ಳಿ ಏತ ನೀರಾವರಿಯ ಮೂಲಕ ಬರ ಪೀಡಿತ ಬೂಕನಕೆರೆ ಹೋಬಳಿಯ 46 ಕೆರೆ-ಕಟ್ಟೆಗಳನ್ನು ಹೇಮಾವತಿ ನೀರಿನಿಂದ ತುಂಬಿಸುವಂತೆ ಒತ್ತಾಯಿಸಿದರು.