ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು-ಶಾಸಕ ಬಣಕಾರ

| Published : Mar 17 2024, 02:02 AM IST

ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು-ಶಾಸಕ ಬಣಕಾರ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಅಂತಹ ಸಮಸ್ಯಾತ್ಮಕ ಗ್ರಾಮಗಳನ್ನು ಈಗಲೇ ಗುರುತಿಸಿ, ಸಮಸ್ಯೆಗೆ ಪರಿಹಾರ ಕೈಗೊಳ್ಳಲು ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಶಾಸಕ ಯು.ಬಿ. ಬಣಕಾರ ತಿಳಿಸಿದರು.

ಹಿರೇಕೆರೂರು: ತಾಲೂಕಿನಲ್ಲಿ ಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಚುನಾವಣಾ ಸಂದರ್ಭದಲ್ಲಿ ತಾಲೂಕಿನ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಅಂತಹ ಸಮಸ್ಯಾತ್ಮಕ ಗ್ರಾಮಗಳನ್ನು ಈಗಲೇ ಗುರುತಿಸಿ, ಸಮಸ್ಯೆಗೆ ಪರಿಹಾರ ಕೈಗೊಳ್ಳಲು ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಶಾಸಕ ಯು.ಬಿ. ಬಣಕಾರ ತಿಳಿಸಿದರು.

ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ತಾಲೂಕು ಮಟ್ಟದ ಬರ ನಿರ್ವಹಣೆ ಕಾರ್ಯಪಡೆ ಸಮಿತಿಯ ಸಭೆ ನಡೆಸಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ಬರಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಪೂರೈಕೆ ವಿಷಯವು ಸವಾಲಿನ ಸಂಗತಿಯಾಗಿದೆ. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಸದಾ ಸಿದ್ಧರಾಗಬೇಕು. ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲ್ಲಿ ಕಾರ್ಯಪಡೆ ರಚಿಸಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಬರ ಪರಿಸ್ಥಿತಿ ತಲೆದೋರಿದ್ದು, ಮಳೆ ಕೊರತೆಯ ಕಾರಣದಿಂದಾಗಿ ಬರುವ ದಿನಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಗ್ರಾಮಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದು, ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ, ಸಮಸ್ಯೆ ಪರಿಹಾರಕ್ಕೆ ಈಗಲೇ ಮಾರ್ಗೋಪಾಯ ಕಂಡುಕೊಳ್ಳಬೇಕು. ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಗ್ರಾಮವಾರು ನೀರಿನ ಮೂಲಗಳನ್ನು ಗುರುತಿಸಿಕೊಂಡು ಜನರಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಯೋಜನೆ ಕೈಗೊಳ್ಳಲು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಅದಕ್ಕೆ ತಕ್ಕ ಪರಿಹಾರೋಪಾಯಗಳನ್ನು ಕಂಡು ಕೊಳ್ಳಬೇಕು. ಗ್ರಾಮವಾರು ಜಲಮೂಲಗಳನ್ನು ಗುರುತಿಸುವ ಸಂದರ್ಭದಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನೂ ಗುರುತಿಸಿ ಅಗತ್ಯವೆನಿಸಿದಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಪಡೆದು ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಹಿರೇಕೆರೂರ ತಾಲೂಕಿನಲ್ಲಿ ೬೭ ಕೊಳವೆ ಬಾವಿಗಳನ್ನು ಹಾಗೂ ರಟ್ಟೀಹಳ್ಳಿ ತಾಲೂಕಿನಲ್ಲಿ ೨೪ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ತಗೆದುಕೊಳ್ಳಲಾಗಿ ಇದಲ್ಲದೇ ವಿವಿಧ ಗ್ರಾಮಗಳಿಂದ ಹೆಚ್ಚುವರಿ ಬೋರ್‌ವೆಲ್‌ಗಳಿಗೆ ಹೊಸದಾಗಿ ಅರ್ಜಿಗಳು ಬಂದಿವೆ. ಕ್ರಮೇಣ ಬೋರ್‌ವೆಲ್ ಕೊರೆಸುವ ಕಾರ್ಯ ಮಾಡಲಾಗುವದು. ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಅನುದಾನ ಲಬ್ಯವಿದ್ದು, ಹೊಸ ಬೋರ್‌ವೆಲ್‌ಗಳಿಗಾಗಿ ೨೫ ಲಕ್ಷ,ಬಾಡಿಗೆ ಆಧಾರದ ಬೋರ್‌ವೆಲ್‌ಗಳ ಪೈಪ್‌ಲೈನು ಹಾಗೂ ಬಾಡಿಗೆಗಾಗಿ ೫೦ ಲಕ್ಷ ಅನುದಾನ ಇದ್ದು ಅಧಿಕಾರಿಗಳು ೨೪ ಗಂಟೆಗಳ ಕಾಲ ನೀರಿನ ಸಮಸ್ಯೆ ಬಗೆಹರಿಸುತ್ತ ತಮ್ಮ ಚಿತ್ತ ಇಟ್ಟಿರಬೇಕು. ತಹಸೀಲ್ದಾರ್‌, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾಯನಿರ್ವಹಿಸಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್‌ ಹಿರೇಕೆರೂರ ಎಚ್. ಪ್ರಭಾಕರಗೌಡ, ರಟ್ಟೀಹಳ್ಳಿ ತಹಸೀಲ್ದಾರ್‌ ಗುರು ಬಸವರಾಜ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಎಂ. ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ರಟ್ಟೀಹಳ್ಳಿ ಪ.ಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ, ನಾಗರಾಜ ಕಟ್ಟಿಮನಿ, ತಾಲೂಕು ನೋಡಲ್‌ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಕಾರಿಗಳು ಹಾಜರಿದ್ದರು.