ಪ್ರಾಣಿ-ಪಕ್ಷಗಳ ಕುಡಿಯುವ ನೀರಿಗಾಗಿ ತೊಟ್ಟಿ ನಿರ್ಮಾಣ

| Published : Mar 17 2024, 02:02 AM IST

ಪ್ರಾಣಿ-ಪಕ್ಷಗಳ ಕುಡಿಯುವ ನೀರಿಗಾಗಿ ತೊಟ್ಟಿ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಪ್ರದೇಶಗಳಲ್ಲಿ ಸ್ಥಳೀಯ ಉಪ ವಲಯಾರಣ್ಯಾಧಿಕಾರಿ ಕಲ್ಲಪ್ಪ ಬರದೂರು ಮತ್ತು ತಂಡದವರು ಅತ್ಯಂತ ಮುತುವರ್ಜಿ ವಹಿಸಿ, ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರೊದಗಿಸಲು ನೀರಿನ ತೊಟ್ಟಿಗಳನ್ನು ನಿರ್ಮಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ದಿನೇದಿನೇ ಅಧಿಕಗೊಳ್ಳುತ್ತಿರುವ ತಾಪಮಾನ ಮತ್ತು ಆವರಿಸಿರುವ ತೀವೃ ನೀರಿನ ಕೊರತೆ ಯಲ್ಲಾಪುರ ತಾಲೂಕಿನಲ್ಲಿಯೂ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಆತಂಕ ಉಂಟುಮಾಡಿದೆ. ಅಂತೆಯೇ, ಕಾಡಿನಲ್ಲಿ ವಾಸಿಸುವ ಪ್ರಾಣಿ-ಪಕ್ಷಿಗಳಿಗೂ ಕುಡಿಯಲು ನೀರಿಲ್ಲದೇ ಹಪಹಪಿಸುವಂತಾಗಿದೆ.

ಈ ಹಿನ್ನೆಲೆಯಲ್ಲಿ ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ಅರಣ್ಯ ಇಲಾಖೆಯ ವತಿಯಿಂದ ಗೌಡ್ತೀಕೊಪ್ಪ, ಮಾವಿನಕಟ್ಟಾ, ಕ್ಯಾದಿಗೇಸರ, ಹೆಮ್ಮಾಡಿಕುಂಬ್ರಿ, ಬಾಳೇಕೊಪ್ಪ, ಹೆಮ್ಮಾಡಿ, ಭರಣಿ, ಬಾಳೇಕೊಪ್ಪ ಕ್ರಾಸ್, ಕೋಟೇಶ್ವರ ದೇವಸ್ಥಾನ ಮುಂತಾದ ಹತ್ತು ಅರಣ್ಯ ಪ್ರದೇಶಗಳಲ್ಲಿ ಸ್ಥಳೀಯ ಉಪ ವಲಯಾರಣ್ಯಾಧಿಕಾರಿ ಕಲ್ಲಪ್ಪ ಬರದೂರು ಮತ್ತು ತಂಡದವರು ಅತ್ಯಂತ ಮುತುವರ್ಜಿ ವಹಿಸಿ, ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರೊದಗಿಸಲು ನೀರಿನ ತೊಟ್ಟಿಗಳನ್ನು ನಿರ್ಮಿಸಿದ್ದಾರೆ..

ಡಿ.ಸಿ.ಎಫ್. ಹರ್ಷಭಾನು ಮತ್ತು ಎ.ಸಿ.ಎಫ್. ಹಿಮವತಿ ಭಟ್ಟ ಇವರ ಮಾರ್ಗದರ್ಶನ, ವಲಯಾರಣ್ಯಾಧಿಕಾರಿ ಅಮಿತ್ ಚವ್ಹಾಣ ಮತ್ತಿತರರ ಸಲಹೆಯಂತೆ ಹೆಮ್ಮಾಡಿ ಮತ್ತು ಭರಣಿಯ ಗ್ರಾಮ ಅರಣ್ಯ ಸಮಿತಿಯ ಗ್ರಾಮ ಅರಣ್ಯಾಭಿವೃದ್ಧಿ ನಿಧಿ ಯೋಜನೆಯ ₹೪೦,೦೦೦ ವೆಚ್ಚದಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕಲ್ಲಪ್ಪ ಬರದೂರು ತಿಳಿಸಿದರು.

ತಮ್ಮ ಮಾನವೀಯ ಅನುಕಂಪದ ಈ ಕಾರ್ಯಕ್ಕೆ ಬೀಟ್ ಫಾರೆಸ್ಟರ್ ಭಿಮಾಶಂಕರ ಮತ್ತು ಸಿಬ್ಬಂದಿ, ಹೆಮ್ಮಾಡಿ ವಿ.ಎಫ್.ಸಿ. ಅಧ್ಯಕ್ಷ ರಾಮಾ ಗೌಡ, ಭರಣಿ ವಿ.ಎಫ್.ಸಿ. ಅಧ್ಯಕ್ಷ ವಿನಾಯಕ ಭಟ್ಟ, ವಿವಿಧ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಸಹಕಾರ ನೀಡಿದ್ದಾರೆ ಎಂದು ಕಲ್ಲಪ್ಪ ಬರದೂರು ಮಾಹಿತಿ ನೀಡಿದರು.

ಈ ತೊಟ್ಟಿಗಳಿಗೆ ಪ್ರತಿ ವಾರಕ್ಕೊಮ್ಮೆ ನಿಗದಿತವಾಗಿ ಅಥವಾ ಖರ್ಚಾದೊಡನೆ ಟ್ಯಾಂಕರ್ ಮೂಲಕ ನೀರನ್ನು ತುಂಬಿಸಲಾಗುವುದೆಂದು ಅವರು ತಿಳಿಸಿದರು.