ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ರೋಡ್‌ ರೇಜ್‌ (ರಸ್ತೆ ಗಲಾಟೆ) ಪ್ರಕರಣ ಮುಂದುವರಿದಿದ್ದು, ಬೈಕ್‌ ಸವಾರನ ಮೇಲೆ ಆಟೋ ಚಾಲಕ ಸೇರಿ ಇಬ್ಬರು ಹಲ್ಲೆ ಮಾಡಿರುವ ಘಟನೆ ಎಚ್‌ಎಎಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿ ಕುಶಾಲ್ ರಾಜ್‌ ಎಂಬುವರು ನೀಡಿದ ದೂರಿನನ್ವಯ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ಮಾ.9 ರಂದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮಾರತಹಳ್ಳಿ, ಔಟರ್ ರಿಂಗ್ ರೋಡ್‌ನ ಖಾಸಗಿ ಆಸ್ಪತ್ರೆಯ ಬಳಿ ಆಟೋ ಚಾಲಕ ತಮ್ಮ ಆಟೋವನ್ನು ಇಂಡಿಕೇಟ‌ರ್ ಹಾಕದೆ ಏಕಾಏಕಿ ಬಲಭಾಗಕ್ಕೆ ಹೋಗಲು ತಿರುಗಿಸಿದ್ದ. ಆ ಸಮಯದಲ್ಲಿ ನಾನು ವಾಹನ ನಿಯಂತ್ರಣ ತಪ್ಪಿ ಕೆಳಕ್ಕೆ ಬೀಳುವ ಪರಿಸ್ಥಿತಿ ಬಂದಿತ್ತು. ತಕ್ಷಣ ಬೈಕನ್ನು ನಿಲ್ಲಿಸಿ ಆಟೋ ಚಾಲಕನಿಗೆ ಸರಿಯಾಗಿ ನೋಡಿಕೊಂಡು ಹೋಗುವಂತೆ ಹೇಳಿದ್ದೆ. ಇಷ್ಟಕ್ಕೆ ಆಟೋ ಚಾಲಕ ಮತ್ತು ಆಟೋದಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಹೆಲೈಟ್‌ನಿಂದ ತಲೆಗೆ ಹೊಡೆದರು. ಬಳಿಕ ನಾನು ಕೆಳಗೆ ಬಿದ್ದಾಗ ಕೈಯಿಂದ ಮತ್ತು ಕಾಲಿನಿಂದ ಎದೆಯ ಭಾಗಕ್ಕೆ ಒದ್ದರು. ಕೂಡಲೇ ನಾನು ತುರ್ತು ಸಹಾಯವಾಣಿಯಾದ 112ಗೆ ಕರೆ ಮಾಡಿದೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆಟೋ ಚಾಲಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋದರು. ನಂತರ ನಾನು ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ನಂತರ ಠಾಣೆಗೆ ಹೋಗಿ ದೂರು ನೀಡಿದೆ ಎಂದು ದೂರುದಾರ ಕುಶಾಲ್‌ ರಾಜ್‌ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ಸಂಬಂಧ ಆಟೋ ಚಾಲಕನನ್ನು ವಶಕ್ಕೆ ಪಡೆದು ಆಟೋವನ್ನು ಜಪ್ತಿ ಮಾಡಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.