ಸಾರಾಂಶ
-ಚಿಕ್ಕಮಗಳೂರು : ವೈಟ್ ಬೋರ್ಡ್ ಬೈಕ್‌ನಲ್ಲಿ ಪ್ರಯಾಣಿಕರನ್ನು ಬಾಡಿಗೆ ರೂಪದಲ್ಲಿ ಕರೆದೊಯ್ಯುತ್ತಿದ್ದ ವ್ಯಕ್ತಿಯನ್ನು ನಗರದ ಆಟೋ ಚಾಲಕರು ತಡೆ ಹಿಡಿದು ನಗರ ಠಾಣೆಗೆ ಒಪ್ಪಿಸಿ, ಆತನ ವಿರುದ್ಧ ಕ್ರಮಕ್ಕೆಆಗ್ರಹಿಸಿದ ಪ್ರಸಂಗ ಶುಕ್ರವಾರ ನಗರ ಪೊಲೀಸ್ ಠಾಣೆ ಮುಂಭಾಗದಲ್ಲಿ ನಡೆಯಿತು.
ಮುಂಜಾನೆ ಸಮಯದಲ್ಲಿ ರಾಪಿಡ್ ಬೈಕ್ ಚಾಲಕ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವೇಳೆ ಗಮನಿಸಿದ ಆಟೋ ಚಾಲಕರು ಆ ವ್ಯಕ್ತಿಯನ್ನು ಹಿಡಿದು ಠಾಣೆಗೆ ಒಪ್ಪಿಸಿ, ತದನಂತರ ಆರ್‌ಟಿಒ ಅಧಿಕಾರಿಗಳು ಧಾವಿಸುವವರೆಗೂ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಠಾಣೆ ಆವರಣದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು.
ಬಳಿಕ ನಗರ ಆಟೋ ಸಂಘದ ಕಾರ್ಯದರ್ಶಿ ಜಗದೀಶ್ ಕೋಟೆ ಮಾತನಾಡಿ, ಪ್ರತಿನಿತ್ಯ ಅನಧಿಕೃತವಾಗಿ ವೈಟ್ ಬೋರ್ಡ್ ಬೈಕ್ ಚಾಲಕರು, ಪ್ರವಾಸಿಗರು ಹಾಗೂ ಪ್ರಯಾಣಿಕರನ್ನು ಪಿಕಪ್ ಮಾಡುವುದು ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಬಡ ಆಟೋ ಚಾಲಕರು ಹಾಗೂ ಮಾಲೀಕರ ಹೊಟ್ಟೆ ಮೇಲೆ ಹೊಡೆದಂತಾಗುತ್ತಿದೆ ಎಂದು ಹೇಳಿದರು.
ಇತ್ತೀಚೆಗೆ ಅನಧಿಕೃತವಾಗಿ ಎರಡ್ಮೂರು ಫುಡ್ ಡೆಲಿವರಿ ಕಂಪನಿಗಳು ಎಲ್ಲೆಂದರಲ್ಲಿ ಹಾಗೂ ಗೋಡೆಗಳ ಮೇಲೆ ಸ್ಟಿಕ್ಕರ್ ಅಂಟಿಸಿ ಫುಡ್ ಡೆಲಿವರಿ ಮಾಡುತ್ತೇವೆಂದು ಪ್ರಚಾರಪಡಿಸುತ್ತಿದೆ. ಆದರೆ ಫುಡ್ ಡೆಲಿವರಿ ಜತೆಗೆ ಪ್ರಯಾಣಿಕರನ್ನು ಇಂತಿಷ್ಟು ಹಣವೆಂದು ನಿಗದಿಗೊಳಿಸಿ ಬೈಕಿನಲ್ಲಿ ಪಿಕಪ್ ಮಾಡಲಾಗುತ್ತಿದೆ ಎಂದು ದೂರಿದರು.
ಬಡ ಹಾಗೂ ಮಧ್ಯಮ ವರ್ಗದವರಾದ ಆಟೋ ಚಾಲಕರು ದಿನನಿತ್ಯ ಬಾಡಿಗೆಗೆ ಬಹಳಷ್ಟು ಕಷ್ಟಪಡಬೇಕಿದೆ. ಸರಿಯಾದ ಬಾಡಿಗೆಯಿಲ್ಲದೇ ಪರಿತಪಿಸುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸ, ಜೀವನ ಸುಧಾರಣೆ, ಆಟೋ ಇಎಂಐ ನಡುವೆ ವೈಟ್ ಬೋರ್ಡ್ ಬೈಕ್ ಹಾವಳಿ ಹೆಚ್ಚಳಗೊಂಡು ಆಟೋ ಚಾಲಕರು ಮತ್ತು ಮಾಲೀಕರಿಗೆ ಜೀವನ ನಡೆಸುವುದೇ ದುಸ್ತರವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿಗೆ ಮನವಿ ಸಲ್ಲಿಸಿ, ಕೂಡಲೇ ಬೈಕಿನಲ್ಲಿ ಬಾಡಿಗೆ ಹೋಗುವ ವ್ಯಕ್ತಿಗಳ ವಿರುದ್ಧ ಕ್ರಮ ವಹಿಸಬೇಕು ಎಂದರು. ಇದಕ್ಕೆ ಪ್ರತಿಯಿಸಿದ ಕೃಷ್ಣಮೂರ್ತಿ ಆಟೋ ಚಾಲಕರ ಸಂಕಷ್ಟಗಳಿಗೆ ಇಲಾಖೆ ಸ್ಪಂದಿಸಲಿದೆ. ಅನಧಿಕೃತ ಬಾಡಿಗೆ ಹೋಗುವವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ ಎಂಬ ಭರವಸೆ ನೀಡಿದ ಮೇರೆಗೆ ಆಟೋ ಚಾಲಕರು ಠಾಣೆಯಿಂದ ನಿರ್ಗಮಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆಟೋ ಸಂಘದ ಅಧ್ಯಕ್ಷ ಉದಯ್‍ಕುಮಾರ್, ನಗರಾಧ್ಯಕ್ಷ ರಾಮೇಗೌಡ, ಚಾಲಕರಾದ ಅಶ್ವತ್, ವೆಂಕಟೇಶ್, ಅಬ್ಬಾಸ್, ಮಂಜುನಾಥ್, ರಿಯಾಜ್ ಹಾಗೂ ಚಾಲಕರು ಇದ್ದರು.