ಸಾರಾಂಶ
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಪಡುಬಿದ್ರಿ - ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೋಲ್ ಸಂಗ್ರಹಣಾ ಕೇಂದ್ರವನ್ನು ಶಾಶ್ವತವಾಗಿ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.ಬೆಳ್ಮಣ್ಣು-ಪಡುಬಿದ್ರಿ-ಕಾರ್ಕಳ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ಮಾತನಾಡಿ, ಕಂಚಿನಡ್ಕದ ಉದ್ದೇಶಿತ ಟೋಲ್ ಗೇಟ್ ಸ್ಥಾಪನೆ ಕಾರ್ಯಾದೇಶಕ್ಕೆ ತಾತ್ಕಾಲಿಕ ತಡೆ ಸ್ವಾಗತಾರ್ಹ. ಆದರೆ ಇದು ಶಾಶ್ವತವಾಗಿ ರದ್ದಾಗುವರೆಗೆ ಹೋರಾಟ ಮುಂದುವರಿಯಲಿದೆ. ಕಾರ್ಕಳ- ಪಡುಬಿದ್ರಿ ನಡುವಿನ ರಸ್ತೆಯಲ್ಲಿ ಎಲ್ಲಿಯೂ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಘೋಷಿಸಿದರು.ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಮಾತನಾಡಿ, ಈ ಟೋಲ್ ಹೋರಾಟವು ಜನರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ಇಲ್ಲಿ ಎಲ್ಲ ಪಕ್ಷಗಳೂ, ಎಲ್ಲ ಜಾತಿಯ ಜನರೂ ಒಗ್ಗೂಡಿದ್ದು, ರಾಜಕೀಯ ರಹಿತ ಹೋರಾಟಕ್ಕೆ ಸರ್ಕಾರವೂ ತಲೆಬಾಗುವುದು ನಿಶ್ಚಯವಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಟೋಲ್ ಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ನಾವೆಲ್ಲರೂ ಒಗ್ಗೂಡೋಣ ಎಂದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಸುರೇಶ್ ಶೆಟ್ಟಿ, ಮುದರಂಗಡಿ ಚರ್ಚ್ ಧರ್ಮಗುರು ರೆ.ಫಾ. ಫೆಡ್ರಿಕ್ ಡಿಸೋಜ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಜೆಡಿಎಸ್‌ನ ಯೋಗೀಶ್ ಶೆಟ್ಟಿ ಬಾಲಾಜಿ, ಕಾಂಗ್ರೆಸ್‌ನ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಬಿಜೆಪಿಯ ಮಟ್ಟಾರು ರತ್ನಾಕರ ಹೆಗ್ಡೆ ಮೊದಲಾದವರು ಮಾತನಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.ವಿವಿಧ ಸಂಘಟೆನೆಗಳ ಕೆ. ಸುಚರಿತ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ರಾಮಕೃಷ್ಣ ಶರ್ಮ ಬಂಟಕಲ್ಲು, ರೇಷ್ಮಾ ಉದಯ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಉದಯ್ ಶೆಟ್ಟಿ ಇನ್ನಾ, ದೀಪಕ್ ಕೋಟ್ಯಾನ್ ಇನ್ನಾ, ವೆಂಕಟರಮಣ ಮುಚ್ಚಿಂತಾಯ, ದಿನಕರ ಬಾಬು, ಅಶೋಕ್ ಕುಮಾರ್ ಶೆಟ್ಟಿ, ಶಶಿಧರ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಶಶಿಕಾಂತ್ ಪಡುಬಿದ್ರಿ, ಲಕ್ಷ್ಮಣ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಶಿಕಲಾ ಮೊದಲಾದವರು ಉಪಸ್ಥಿತರಿದ್ದರು.ಜಿಲ್ಲೆಯ ವಿವಿಧ ಸಂಘಟನೆಗಳು, ಕಾಪು, ಕಾರ್ಕಳ, ಉಡುಪಿ, ಮೂಲ್ಕಿ ತಾಲೂಕು ಮತ್ತು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸುತ್ತಲಿನ 40 ಗ್ರಾಮಗಳ ಸಾವಿರಾರು ಸಾರ್ವಜನಿಕರು ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ಬಳಿಕ ಕಂಚಿನಡ್ಕದಿಂದ ಪಡುಬಿದ್ರಿ ಜಂಕ್ಷನ್ ವರೆಗೆ ಜಾಥಾ ನಡೆಯಿತು.ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಕಾಪು ತಹಸೀಲ್ದಾರ್ ಡಾ. ಪ್ರತಿಭಾ ಆರ್. ಅವರ ಮೂಲಕ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರಭಾರ ಡಿವೈಎಸ್ಪಿ ಗೀತಾ ಪಾಟೀಲ್, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಮೊದಲಾದವರು ಜತೆಗಿದ್ದರು.