ಸಾರಾಂಶ
ಕೊಳ್ಳೇಗಾಲದ ನಿಸರ್ಗ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಡಿಡಿಪಿಯು ಮಂಜುನಾಥ ಪ್ರಸನ್ನ, ಡಾ. ದತ್ತೇಶ್ ಕುಮಾರ್, ನಾಗರಾಜು, ಶಂಕರ್, ಕೖಷ್ಣೇಗೌಡ ಇದ್ದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ವಿದ್ಯಾರ್ಥಿಗಳು ಸಮಾಜಕ್ಕೆ ದಾರಿದೀಪವಾಗಬೇಕು, ನೀತಿ ಬದುಕನ್ನು ಅನುಸರಿಸಬೇಕು. ಪಿಯುಸಿ ಹಂತದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡನ್ನೂ ಕಲಿಯಬಹುದು. ಆದರೆ ಯುವ ಸಮೂಹ ಕೆಟ್ಟದ್ದರಿಂದ ದೂರ ಉಳಿದು ಸನ್ಮಾರ್ಗದಲ್ಲಿ ನಡೆದು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ ಹೇಳಿದರು.ನಗರದ ಕಾಲೇಜು ಸಭಾಂಗಣದಲ್ಲಿ ಶನಿವಾರ ಸ್ವಾತಂತ್ರ್ಯ ಪದವಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾನಸ ಸಂಸ್ಥೆಯ ಸಂಸ್ಥಾಪಕ ಡಾ.ದತ್ತೇಶ್ ಕುಮಾರ್ ಅವರು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ತಮ್ಮ ಸಂಸ್ಥೆಯ ನಿಸರ್ಗ ಕಾಲೇಜಿನ ವಿದ್ಯಾರ್ಥಿಗೆ ಒಂದು ಲಕ್ಷ ರು., ದ್ವಿತೀಯ ಸ್ಥಾನ ಪಡೆದವರಿಗೆ 50 ಸಾವಿರ ರು., ತೃತೀಯ ಸ್ಥಾನಕ್ಕೆ 25 ಸಾವಿರ ರು.ನಗದು ಪುರಸ್ಕಾರ ಘೋಷಿಸಿರುವುದು ಹೆಮ್ಮೆಯ ಸಂಗತಿ. ಹಾಗಾಗಿ ನಗದು ಪುರಸ್ಕಾರ ಗಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.ಈ ಸಂಸ್ಥೆಯಲ್ಲಿ ಕಳೆದ ಬಾರಿ ಅಧ್ಯಯನ ಮಾಡಿದ 189ಕ್ಕೂ ಅಧಿಕ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವುದು ಶ್ಲಾಘನೀಯ. ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಹರ್ಷಿತಾ ಎಂಬ ವಿದ್ಯಾರ್ಥಿನಿ ಎಂಬಿಬಿಎಸ್‌ಗೆ ಸೇರಿ ಇಂದು ಡಾ.ಹರ್ಷಿತಾ ಆಗಿದ್ದು ಅವರಿಗೂ ಸನ್ಮಾನ ನೆರವೇರಿಸಿರುವುದು ಹೆಮ್ಮೆಯ ವಿಚಾರ, ಇದು ನಿಮ್ಮಲ್ಲರ ಬದುಕಿನಲ್ಲೂ ಸ್ಫೂರ್ತಿಯಾಬೇಕು ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿದ ಡಾ. ಹರ್ಷಿತಾ ಮಾತನಾಡಿ, ಯಶಸ್ಸು ಸಾಧಿಸಲು ಪರಿಶ್ರಮ ಅಗತ್ಯ. ಎಲ್ಲರೂ ದುಶ್ಚಟಗಳಿಂದ ದೂರವಿರಬೇಕು. ಎಂಬಿಬಿಎಸ್ ತುಂಬಾ ಕಷ್ಟ ಇದೆ. ಛಲ ಬಿಡದೆ ಓದಿದರೆ ಯಶಸ್ಸು ಖಂಡಿತ ಸಾಧ್ಯ. ವ್ಯಾಸಂಗದ ಸಮಯದಲ್ಲಿ ಬಹಳಷ್ಟು ತ್ಯಾಗ ಮಾಡಬೇಕು. ಪ್ರಾಯೋಗಿಕ ಅಭ್ಯಾಸಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದರು.ಮಾನಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ನಾಗರಾಜು, ಪ್ರಾಂಶುಪಾಲರಾದ ಚೆನ್ನಶೆಟ್ಟಿ ಎಂ. ಧನಂಜಯ ಡಿ., ಕೃಷ್ಣೇಗೌಡ ಡಿ., ಮುಖ್ಯ ಶಿಕ್ಷಕ ಶಂಕರ್ ಆರ್., ಸಹ ಮುಖ್ಯ ಶಿಕ್ಷಕಿ ಗಿರಿಜಾಲಕ್ಷ್ಮಿ, ಸಂಯೋಜನಾಧಿಕಾರಿ ಡಾ ಸಿ ಚಂದ್ರಶೇಖರ್ ಇದ್ದರು.
ಸಾಧನೆಗೆ ಮುಂದಾಗುವ ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು, ಅವಿರತ ಪರಿಶ್ರಮದ ಮೂಲಕ ಸಾಧನೆಗೆ ಮುನ್ನುಡಿಯಾಗಬೇಕು, ಈ ಬಾರಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿ ನಮ್ಮ ಸಂಸ್ಥೆಯ ಬಹುಮಾನಕ್ಕೆ ಭಾಜನರಾಗಬೇಕು, ಪಿಯುಸಿ ಹಂತ ವಿದ್ಯಾರ್ಥಿಗಳ ಬದುಕಲ್ಲಿ ಆಮೂಲಾಗ್ರ ಬದಲಾವಣೆ ಘಟ್ಟ, ಹಾಗಾಗಿ ಈ ಹಂತದಲ್ಲಿ ಯಶಸ್ವಿಯತ್ತ ದಾಪುಗಾಲಿಡಬೇಕು.ಡಾ.ದತ್ತೇಶ್ ಕುಮಾರ್, ಮಾನಸ ಸಂಸ್ಥೆ ಕಾರ್ಯದರ್ಶಿ