ಸಾರಾಂಶ
ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ಸಚಿವ ಡಿ.ಸುಧಾಕರ್ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಹಿರಿಯೂರು:
ತಾಲೂಕಿನ ಆದಿವಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ಸಚಿವ ಡಿ.ಸುಧಾಕರ್ ಭೇಟಿ ನೀಡಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದ್ದಾರೆ.ಕಳೆದ ಜುಲೈ 24 ರಂದು ಕನ್ನಡಪ್ರಭ ಪತ್ರಿಕೆಯು ಆದಿವಾಲದ ಶತಮಾನದ ಸರ್ಕಾರಿ ಶಾಲೆ, ಸಮಸ್ಯೆಗಳ ಸರಮಾಲೆ ಎಂದು ಸವಿಸ್ತಾರವಾದ ಲೇಖನ ಪ್ರಕಟಿಸಿತ್ತು. ಇದೀಗ ಸಚಿವರು ಶಾಲೆಗೆ ಶನಿವಾರ ಖುದ್ದು ಭೇಟಿ ನೀಡಿ ಪರಿಶೀಲಿಸಿ ಶಾಲೆಗೆ ಅಗತ್ಯವಿರುವ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಸಲಕರಣೆಗಳ ಜೋಡಣೆಗೆ ಕೊಠಡಿ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿಯೇ ನೆರವು ನೀಡುವುದಾಗಿ ಘೋಷಿಸಿದರು.
ಪತ್ರಿಕೆಯ ವರದಿ ಪರಿಣಾಮವಾಗಿ ಸಚಿವರು ಭೇಟಿ ನೀಡಿ ಶಾಲೆ ಸಮಸ್ಯೆಗಳನ್ನು ಆಲಿಸಿದ್ದು ನೆರವು ನೀಡುವುದಾಗಿ ಹೇಳಿದ್ದಾರೆ ಎಂದು ಗ್ರಾಮಸ್ಥ ಚಮನ್ ಷರೀಫ್ ಹರ್ಷ ವ್ಯಕ್ತಪಡಿಸಿದ್ದಾರೆ.ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯ ಸೈಯದ್ ಮುನೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಮುಖಂಡರಾದ ಗೌರೀಶ್, ಮುಬಾರಕ್, ಶಿವಕುಮಾರ್, ಅನ್ಸರ್ ಅಲಿ, ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಮುಂತಾದವರು ಇದ್ದರು.