ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಪರ್ಮಿಟ್ ಇಲ್ಲದೆ ಬ್ಯಾಟರಿ ಚಾಲಿತ ರಿಕ್ಷಾಗಳ ಸಂಚಾರಕ್ಕೆ ತಡೆಯೊಡ್ಡಬೇಕು ಎಂದು ಆಗ್ರಹಿಸಿ ರಿಕ್ಷಾ ಚಾಲಕರು ನಗರದಲ್ಲಿ ನಾಲ್ಕು ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯನ್ನು ಜನಪ್ರತಿನಿಧಿಗಳ ಆಶ್ವಾಸನೆ ಮೇರೆಗೆ ಗುರುವಾರ ಸಮಾಪ್ತಿಗೊಳಿಸಿದ್ದಾರೆ.ನಗರದ ಕೃಷ್ಣ ಭವನ ಪಾರ್ಕ್ ಬಳಿ ನಾಲ್ಕು ದಿನಗಳ ಕಾಲ ನಡೆದ ಧರಣಿಯಲ್ಲಿ ನೂರಾರು ಮಂದಿ ರಿಕ್ಷಾ ಚಾಲಕರು ಭಾಗವಹಿಸಿದ್ದರು. ಬ್ಯಾಟರಿ ಚಾಲಿತ ರಿಕ್ಷಾಗಳಿಗೆ ತಡೆಯೊಡ್ಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಆಟೋ ರಿಕ್ಷಾ ಚಾಲಕ ಮಾಲೀಕರ ಸಂಘ ಮತ್ತು ಸಮಾನ ಮನಸ್ಕರ ವೇದಿಕೆ ವತಿಯಿಂದ ಸೋಮವಾರ ಧರಣಿ ಆರಂಭಿಸಲಾಗಿತ್ತು.ಭೇಟಿ ನೀಡಿದ ಚೌಟ, ಕಾಮತ್, ಐವನ್: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಈ ವಿಚಾರವನ್ನು ಈಗಾಗಲೇ ಕೇಂದ್ರದ ಗಮನಕ್ಕೆ ತಂದಿದ್ದೇನೆ. ಮುಂದಿನ ವಾರ ದೆಹಲಿಗೆ ಹೋದಾಗ ಸಂಬಂಧಿಸಿದ ಸಚಿವರನ್ನು ಭೇಟಿಯಾಗಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಸುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಇ-ವಾಹನಗಳ ನಿಯಮ ಕೇಂದ್ರದ ಅಧೀನಕ್ಕೆ ಬಂದರೂ ರಾಜ್ಯಕ್ಕೆ ಅನ್ವಯಿಸುವಂತೆ ಸೂಕ್ತ ಕಾನೂನನ್ನು ತಿದ್ದುಪಡಿ ಮಾಡಿ ರಿಕ್ಷಾ ಚಾಲಕರ ಹಿತ ಕಾಯಲಾಗುವುದು. ಮುಂದಿನ ಅಧಿವೇಶನದಲ್ಲಿ ಈ ಕುರಿತು ಸೂಕ್ತ ನಿಯಮ ರೂಪಿಸುವುದಾಗಿ ಭರವಸೆ ನೀಡಿದರು.ಈ ವಿಚಾರದ ಕುರಿತು ರಾಜ್ಯ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಸಹಕಾರ ನೀಡುವುದಾಗಿ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಜನಪ್ರತಿನಿಧಿಗಳ ಭರವಸೆ ಮೇರೆಗೆ ಹಾಗೂ ನೀತಿ ಸಂಹಿತೆ ಕೂಡ ಜಾರಿಯಲ್ಲಿ ಇರುವುದರಿಂದ ರಿಕ್ಷಾ ಚಾಲಕರು ತಾತ್ಕಾಲಿಕವಾಗಿ ಪ್ರತಿಭಟನೆ ಅಂತ್ಯಗೊಳಿಸಿದರು.ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ವಿಷ್ಣುಮೂರ್ತಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇ-ರಿಕ್ಷಾಗಳ ಸಂಚಾರದ ಕುರಿತು ಪರಿಷ್ಕೃತ ನೀತಿ ಜಾರಿಗೊಳಿಸಬೇಕು. ಪರ್ಮಿಟ್ ಇಲ್ಲದೆ ಇ-ರಿಕ್ಷಾಗಳಿಗೆ ಬಾಡಿಗೆ ಮಾಡಲು ಅವಕಾಶ ನೀಡಬಾರದು. ಈ ಮೂಲಕ ಜೀವನೋಪಾಯಕ್ಕಾಗಿ ರಿಕ್ಷಾವನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳಿಗೆ ಆಗುತ್ತಿರುವ ತೊಂದರೆಯನ್ನು ಪರಿಹರಿಸಬೇಕು. ಸದ್ಯಕ್ಕೆ ಜನಪ್ರತಿನಿಧಿಗಳು ಸೂಕ್ತ ಭರವಸೆ ನೀಡಿದ್ದಾರೆ. ಅದು ಕೂಡಲೆ ಜಾರಿಯಾಗಬೇಕಿದೆ ಎಂದರು.
ನೂರಾರು ಮಂದಿ ಭಾಗಿ:ನಾಲ್ಕು ದಿನ ನಡೆದ ಪ್ರತಿಭಟನೆಯಲ್ಲಿ ನೂರಾರು ರಿಕ್ಷಾ ಚಾಲಕರು ರಿಕ್ಷಾ ಸಂಚಾರವನ್ನು ಸ್ಥಗಿತಗೊಳಿಸಿ ಭಾಗವಹಿಸಿದ್ದರು. ಗುರುವಾರ 250ಕ್ಕೂ ಅಧಿಕ ಮಂದಿ ಪ್ರತಿಭಟನೆ ನಡೆಸಿದ್ದಾರೆ. ಪ್ರಥಮ ದಿನವಾದ ಸೋಮವಾರ ಆರ್‌ಟಿಒ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪೊಲೀಸರ ಮನವಿ ಮೇರೆಗೆ ಪ್ರತಿಭಟನೆಯನ್ನು ಕೃಷ್ಣ ಭವನ ಪಾರ್ಕ್ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು.
ಹೋರಾಟ ಸಮಿತಿ ಸಹ ಸಂಚಾಲಕ ದಯಾನಂದ ಶೆಟ್ಟಿ, ಮುಖಂಡರಾದ ಮೋಹನ್ ಕುಮಾರ್, ಆಲ್ಫೋನ್ಸ್ ಡಿಸೋಜ, ಅಬ್ದುಲ್ ರಝಾಕ್ ವಾಮಂಜೂರು, ಒಕ್ಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್, ಪ್ರಮುಖರಾದ ಚಂದ್ರಹಾಸ ಕುಲಾಲ್, ರಾಜೇಶ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.ಶೀಘ್ರ ಮಹಾನಗರ ಪಾಲಿಕೆಗೆ ಮುತ್ತಿಗೆ!
ರಿಕ್ಷಾ ಸ್ಟ್ಯಾಂಡ್‌ಗಳಲ್ಲಿ ಬ್ಯಾಟರಿ ಚಾಲಿತ ರಿಕ್ಷಾಗಳಿಗೂ ಪಾರ್ಕ್ ಮಾಡಲು ಮಂಗಳೂರು ಮಹಾನಗರ ಪಾಲಿಕೆ ಅವಕಾಶ ನೀಡಿದೆ. ಇದನ್ನು ಖಂಡಿಸಿ ನೀತಿ ಸಂಹಿತೆ ಮುಗಿದ ಕೂಡಲೆ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲು ಯೋಜಿಸಿದ್ದೇವೆ. ಈ ಕುರಿತು ಕೆಲವೇ ದಿನಗಳಲ್ಲಿ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಮುತ್ತಿಗೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ವಿಷ್ಣುಮೂರ್ತಿ ತಿಳಿಸಿದರು.