ವರ್ಷ ಪೂರ್ತಿ ಕನ್ನಡ ತೇರು ಎಳೆಯುವ ಆಟೋ ಚಾಲಕರು: ಸ್ವಾಮೀಜಿ

| Published : Nov 25 2024, 01:04 AM IST

ವರ್ಷ ಪೂರ್ತಿ ಕನ್ನಡ ತೇರು ಎಳೆಯುವ ಆಟೋ ಚಾಲಕರು: ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಆಟೋ ಚಾಲಕರು ವರ್ಷ ಪೂರ್ತಿ ಕನ್ನಡದ ತೇರನ್ನು ಎಳೆಯುತ್ತಾರೆ ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮೀಸೇನಭಟ್ಟಾರಕ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಜೈ ಶ್ರೀ ಭುವನೇಶ್ವರಿ ಆಟೋ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ದಿ ಸಂಘದ ಕನ್ನಡ ರಾಜ್ಯೋತ್ಸವ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಆಟೋ ಚಾಲಕರು ವರ್ಷ ಪೂರ್ತಿ ಕನ್ನಡದ ತೇರನ್ನು ಎಳೆಯುತ್ತಾರೆ ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮೀಸೇನಭಟ್ಟಾರಕ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.ಬಸ್‌ ನಿಲ್ದಾಣದಲ್ಲಿ ಜೈ ಶ್ರೀ ಭುವನೇಶ್ವರಿ ಆಟೋ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ 69 ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು. ಆಟೋ ಚಾಲಕರು ಪ್ರಕೃತಿಯಂತೆ. ಸಮಾಜ ತಮಗೆ ನೀಡಿದ್ದನ್ನು ತಮಗೆ ಏನನ್ನು ಉಳಿಸಿಕೊಳ್ಳದೆ ಸಮಾಜಕ್ಕೆ ಮತ್ತೆ ಅರ್ಪಿಸುತ್ತಾರೆ. ಸಾಮಾಜಿಕ ಕಾರ್ಯ, ಕನ್ನಡದ ಕಾರ್ಯಕ್ರಮದಲ್ಲಿ ಆಟೋ ಚಾಲಕರು ಎತ್ತರದ ಸ್ಥಾನದಲ್ಲಿದ್ದಾರೆ. ಕಷ್ಟದಲ್ಲಿರುವವರಿಗೆ ಆಟೋ ಚಾಲಕರೇ ಮೊದಲು ಸ್ಪಂದಿಸಿ ತಮ್ಮ ಕೈಲಾದ ಸಹಾಯ ಮಾಡುತ್ತಾರೆ ಎಂದರು. ಕರ್ನಾಟಕ ರಾಜ್ಯ ಎಲ್ಲಾ ಭಾಷಿಗರಿಗೂ ಆಶ್ರಯ ನೀಡಿದೆ. ನಾನು ಆಫ್ರಿಕಾದ ಕೀನ್ಯ ರಾಜ್ಯಕ್ಕೆ ಹೋದಾಗ ಅಲ್ಲೂ ಕನ್ನಡಿಗರೊಬ್ಬರು ಅಂಗಡಿ ಇಟ್ಟುಕೊಂಡು ಕನ್ನಡದ ನಾಮಫಲಕ ಹಾಕಿದ್ದರು ಎಂದು ನೆನಪಿಸಿಕೊಂಡರು. ಪ್ರಸ್ತುತ ಈ ಭಾಗದಲ್ಲಿ ಶಾಸಕ ರಾಜೇಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಶ್ರೀನಿವಾಸ್ ಹಾಗೂ ಡಾ.ಕೆ.ಪಿ.ಅಂಶುಮಂತ್ ಅವರಿಗೆ ವಿವಿಧ ಅಭಿವೃದ್ಧಿ ನಿಗಮದ ಸ್ಥಾನ ಸಿಕ್ಕಿದೆ. ಅವರೆಲ್ಲಾ ಒಟ್ಟಾಗಿ ನರಸಿಂಹರಾಜಪುರ ತಾಲೂಕಿನ ಭದ್ರಾ ಹಿನ್ನೀರು, ಅಭಯಾರಣ್ಯ ಸೇರಿಸಿ ಪ್ರವಾಸಿ ತಾಣ ಮಾಡಿ ಅಭಿವೃದ್ಧಿ ಪಡಿಸಿದರೆ ನರಸಿಂಹರಾಜಪುರ ತಾಲೂಕು ಪ್ರವಾಸಿಗರ ತಾಣವಾಗಿ ಆಟೋ ರಿಕ್ಷಾದವರಿಗೂ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.ಶಾಸಕ ಹಾಗೂ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಮಾತನಾಡಿ, ಕರ್ನಾಟಕ ರಾಜ್ಯಕ್ಕೆ 8 ಜ್ಞಾನ ಪೀಠ ಪ್ರಶಸ್ತಿ ಸಿಕ್ಕಿದೆ. ಅನೇಕ ಕವಿಗಳು, ಋಷಿ ಮುನಿಗಳು, ಮಹಾ ರಾಜರು ಆಳ್ವಿಕೆ ಮಾಡಿದ ಕರ್ನಾಟಕ ದೇಶ, ವಿದೇಶಗಳಿಗೆ ಮಾದರಿ ಯಾಗಿ ನಿಂತಿದೆ. ನಮ್ಮ ರಾಜ್ಯದ ಅನೇಕ ಕವಿಗಳ ಕಾದಂಬರಿ ಚಲನಚಿತ್ರವಾಗಿ ತೆರೆಯ ಮೇಲೆ ಬಂದಿದೆ. ಕನ್ನಡ ಮಾತನಾಡುವ 5 ಪ್ರಾಂತ್ಯ ಗಳನ್ನು ಒಂದು ಗೂಡಿಸಿದ ನವಂಬರ್ ತಿಂಗಳು ಕನ್ನಡಿಗರಿಗೆ ಸಂಭ್ರಮದ ಮಾಸ. ದಿನದ 24 ಗಂಟೆ ಕನ್ನಡ ಬಳಸಬೇಕು ಎಂದು ಕರೆ ನೀಡಿದರು.ಅತಿಥಿಯಾಗಿದ್ದ ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಆಟೋ ಚಾಲಕರು ಸಮಾಜದ ಆಪದ್ಭಾಂದವರಂತೆ ಕೆಲಸ ಮಾಡುತ್ತಾರೆ. ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕ್ಷೇಮಾಭಿವೃದ್ದಿ ಸಂಘ ಮಾಡಿಕೊಂಡು ಕಷ್ಟ ದಲ್ಲಿರುವ ಆಟೋ ಚಾಲಕರ ಕುಟುಂಬಕ್ಕೆ ನೆರವು ನೀಡುತ್ತಾರೆ. ನರಸಿಂಹರಾಜಪುರ ತಾಲೂಕಿನ ಜನರು ವಿವಿಧತೆಯಲ್ಲಿ ಏಕತೆ ಕಂಡು ಸಾಮರಸ್ಯದಿಂದ ಬಾಳುತ್ತಿದ್ದಾರೆ. ನಾವೆಲ್ಲಾ ಕನ್ನಡಿಗರು ಎಂದು ಹೆಮ್ಮೆಯಿಂದ ಹೇಳಬೇಕು ಎಂದರು. ಅತಿಥಿಯಾಗಿದ್ದ ರಾಮನಗರದ ಲೋಕಾಯುಕ್ತ ಡಿಎಸ್ಪಿ ಸುಧೀರ್ ಮಾತನಾಡಿ, ಕನ್ನಡ ವೈಜ್ಞಾನಿಕ ಭಾಷೆಯಾಗಿದೆ. ಕನ್ನಡವನ್ನು ಲಿಪಿಗಳ ರಾಣಿ ಎಂದು ಕರೆಯುತ್ತಾರೆ. ಕನ್ನಡ ಪರ ಸಂಘಟನೆಗಳ ಹೋರಾಟದ ಫಲವಾಗಿ ರಾಜ್ಯದ ಎಲ್ಲಾ ಕಡೆ ಈಗ ಕನ್ನಡ ನಾಮಫಲಕ ಹೆಚ್ಚಾಗಿ ಕಾಣುತ್ತಿದೆ. ಉದ್ಯೋಗದಲ್ಲೂ ಕನ್ನಡಿಗರಿಗೆ ಮೀಸಲಾತಿ ಸಿಗುತ್ತಿದೆ.ಇಡೀ ದೇಶದಲ್ಲೇ ಕರ್ನಾಟಕದ ನೆಲ ಪುಣ್ಯಭೂಮಿಯಾಗಿದೆ ಎಂದು ಕನ್ನಡಿಗರೆಲ್ಲಾ ಹೆಮ್ಮೆ ಪಡಬೇಕು. ನ.ರಾ.ಪುರದಲ್ಲಿ ಆಟೋ ಸಂಘದವರು ರಕ್ತದಾನ ಶಿಬಿರ ನಡೆಸಿ ಸಾಮಾಜಿಕ ಕಾರ್ಯ ಮಾಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ರಾಮನಗರದ ಲೋಕಾಯುಕ್ತ ಡಿಎಸ್ಪಿ. ಎಸ್. ಸುಧೀರ್ ಹಾಗೂ ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಯಿತು. ರಕ್ತದಾನಿಗಳಿಗೆ ಅಭಿನಂದನಾ ಪತ್ರ ನೀಡಲಾಯಿತು.ಸಾಂಸ್ಕೃತಕ ಕಾರ್ಯಕ್ರಮದ ಅಂಗವಾಗಿ ಸರಿಗಮಪ ಖ್ಯಾತಿಯ ಕು. ದಿಯಾ ಹೆಗ್ಡೆ, ಎದೆ ತುಂಬಿ ಹಾಡುವೆನು ಖ್ಯಾತಿ ನಾದಿರಾ ಭಾನು, ಸರಿಗಮಪ ಖ್ಯಾತಿಯ ಸಂದೇಶ್ ನೀರ್ಮಾರ್ಗ ಮುಂತಾದ ಕಲಾವಿದರು ಸಂಗೀತ ಸಂಜೆ ನಡೆಸಿಕೊಟ್ಟರು.

ಸಭೆ ಅಧ್ಯಕ್ಷತೆಯನ್ನು ಜೈ ಶ್ರೀ ಭುವನೇಶ್ವರಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ವಿ.ಮಧುಸೂದನ್ ವಹಿಸಿದ್ದರು. ಅತಿಥಿ ಗಳಾಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸುರೈಯಾಭಾನು, ಸ್ಥಾಯಿ ಸಮಿತಿ ಸದಸ್ಯ ಪ್ರಶಾಂತಶೆಟ್ಟಿ, ಮುಖಂಡರಾದ ಜುಬೇದ, ಪೂರ್ಣೇಶ್, ಅರುಣಕುಮಾರ್, ಆಶೀಶ್ ಕುಮಾರ್, ಪಿ.ಆರ್.ಸದಾಶಿವ, ಪಿ.ಜೆ.ಆಂಟೋನಿ, ಜಗದೀಶ್, ಚಂದ್ರಶೇಖರ್, ಕಣಿವೆ ವಿನಯ್, ವಕೀಲ ಜಿ.ದಿವಾಕರ, ಗೂಡ್ಸ್ ಆಟೋ ಚಾಲಕರ ಸಂಘದ ಅಧ್ಯಕ್ಷ ಸುನೀಲ್, ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಅಣ್ಣಪ್ಪ, ನಂದಿನಿ ಆಲಂದೂರು, ಅಭಿನವ ಗಿರಿರಾಜ್ ಮತ್ತಿತರರು ಇದ್ದರು.