ಸಾರಾಂಶ
ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ಭಾನುವಾರ ಬೆಳಗ್ಗೆ ಪುಣ್ಯನದಿ ಕುಮಾರಾಧಾರಾದಲ್ಲಿ ಶ್ರೀ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ನಡೆಯಿತು.
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ಭಾನುವಾರ ಬೆಳಗ್ಗೆ ಪುಣ್ಯನದಿ ಕುಮಾರಾಧಾರಾದಲ್ಲಿ ಶ್ರೀ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ನಡೆಯಿತು.ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಯಡಪಡಿತ್ತಾಯರು ಅವಭೃತೋತ್ಸವದ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಸಹಸ್ರಾರು ಭಕ್ತರು ದೇವರ ಅವಭೃತ ಸ್ನಾನದಲ್ಲಿ ಭಾಗವಹಿಸಿ ಪುಣ್ಯಸ್ನಾನ ಮಾಡಿ ಕೃತಾರ್ಥರಾದರು.
ಬೆಳಗ್ಗೆ ದೇವಳದ ದ್ವಾದಶಿ ಮಂಟಪದಲ್ಲಿ ಓಕುಳಿ ಪೂಜೆ ಮತ್ತು ಓಕುಳಿ ಚೆಲ್ಲಾಟ ನೆರವೇರಿತು. ಬಳಿಕ ದೇವರಿಗೆ ಓಕುಳಿ ಸಮರ್ಪಣೆಯಾಗಿ ಭಕ್ತಾದಿಗಳಿಗೆ ಓಕುಳಿ ಪ್ರೋಕ್ಷಣೆ ಮತ್ತು ಓಕುಳಿ ಚೆಲ್ಲಾಟ ನಡೆಯಿತು. ನಂತರ ದೇವರ ಅವಭೃತೋತ್ಸವ ಸವಾರಿದೇವಳದಿಂದ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು. ಕುಮಾರಧಾರ ನದಿಯ ಮತ್ಸ್ಯತೀರ್ಥದಲ್ಲಿ ದೇವರ ನೌಕಾವಿಹಾರ ನಡೆಯಿತು. ಮತ್ಸ್ಯತೀರ್ಥದ ಶ್ರೀ ದೇವರ ಜಳಕದಗುಂಡಿಯಲ್ಲಿ ಅವಭೃತೋತ್ಸವ ನಡೆಯಿತು. ಮಂತ್ರ ಘೋಷದ ನಡುವೆ ಪ್ರಧಾನ ಅರ್ಚಕರು ಶಂಖ ತೀರ್ಥ ಮತ್ತು ಸೀಯಾಳಾಭಿಷೇಕ ಸೇರಿದಂತೆ ವಿವಿಧ ವೈದಿಕ ಕಾರ್ಯಗಳನ್ನು ನಡೆಸಿದರು. ದೇವರ ಜಳಕದ ಬಳಿಕ ಕುಮಾರಧಾರ ನದಿತೀರದ ಅವಭೃತಕಟ್ಟೆಯಲ್ಲಿ ದೇವರಿಗೆ ವಿಶೇಷ ಕಟ್ಟೆಪೂಜೆ ನೆರವೇರಿತು.ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವದ ಸಂದರ್ಭದಲ್ಲಿ ಕ್ಷೇತ್ರದ ಗಜರಾಣಿ ಯಶಸ್ವಿ ಎಲ್ಲರಂತೆ ತಾನೂ ಕೂಡಾ ಸ್ನಾನ ಮಾಡಿ ಜಲಕ್ರೀಡೆಯಲ್ಲಿ ಸಂಭ್ರಮಿಸಿತು. ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಮಾಸ್ಟರ್‌ಪ್ಲಾನ್ ಸದಸ್ಯ ಪವನ್ ಎಂ.ಡಿ,ಲೋಲಾಕ್ಷ ಕೈಕಂಬ, ಠಾಣಾಧಿಕಾರಿ ಕಾರ್ತಿಕ್, ಸುದೀರ್ ಕುಮಾರ್ ಶೆಟ್ಟಿ,ಅಜಿತ್ ಶೆಟ್ಟಿ ಕಡಬ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.-----------೧೨ರಂದು ನೀರಿನಲ್ಲಿ ಬಂಡಿ ಉತ್ಸವ
ಡಿ.೧೨ರಂದು ಮಾರ್ಗಶಿರ ಶುದ್ಧ ದ್ವಾದಶಿಯಂದು ಕೊಪ್ಪರಿಗೆ ಇಳಿಯುವುದರೊಂದಿಗೆ ವಾರ್ಷಿಕ ಚಂಪಾಷಷ್ಠಿ ಜಾತ್ರೆ ಮುಕ್ತಾಯಗೊಳ್ಳಲಿದೆ. ಈ ದಿನ ರಾತ್ರಿ ದೇವಳದ ಹೊರಾಂಗಣದಲ್ಲಿ ನೀರಿನಲ್ಲಿ ಬಂಡಿ ಉತ್ಸವ ನಡೆಯಲಿದೆ.ಅಲ್ಲದೆ ಗೋಪುರ ನಡಾವಳಿ ನೆರವೇರಲಿದೆ.