ಅವಧೂತ ರಂಗಲಿಂಗೇಶ್ವರರು ಆಧ್ಯಾತ್ಮಿಕ ಲೋಕದ ಚಿಂತಕರು

| Published : Oct 13 2024, 01:01 AM IST

ಸಾರಾಂಶ

Avadhuta Rangalingeshwar was a thinker of the spiritual world

-ಅವಧೂತ ರಂಗಲಿಂಗೇಶ್ವರರ 15ನೇ ವರ್ಷದ ಪುಣ್ಯಾರಾಧನೆ ನಿಮಿತ್ತ ಧರ್ಮ ಸಭೆ

----

ಕನ್ನಡಪ್ರಭ ವಾರ್ತೆ ಶಹಾಪುರ

ಅವಧೂತ ರಂಗಲಿಂಗೇಶ್ವರರು ಆಧ್ಯಾತ್ಮಿಕ ಲೋಕದ ತಾತ್ವಿಕ ಚಿಂತಕರು ಎಂದು ಮಹರ್ಷಿ ವಾಲ್ಮಿಕಿ ಸಂಘದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ ಹೇಳಿದರು.

ತಾಲೂಕಿನ ಮುಡಬೂಳ ಗ್ರಾಮದಲ್ಲಿ ನಡೆದ ಅವಧೂತ ರಂಗಲಿಂಗೇಶ್ವರರ 15ನೇ ವರ್ಷದ ಪುಣ್ಯಾರಾಧನೆ ಪ್ರಯುಕ್ತ ನಡೆದ ಧರ್ಮ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಯಾವುದೇ ಜಾತಿ, ಮತ, ಪಂಥ, ಪಂಗಡ ಎಂಬ ಭೇದ ಮಾಡದೇ ಮನುಕುಲದ ಉದ್ಧಾರಕ್ಕಾಗಿ ಬದುಕನ್ನು ಮೂಡುಪಾಗಿಟ್ಟ ಶ್ರೇಷ್ಠ ಶರಣರಾದ ರಂಗಲಿಂಗೇಶ್ವರರ ತತ್ವ ವಿಚಾರಗಳ ಆಶಯಗಳ ಹಿನ್ನೆಲೆಯಲ್ಲಿ ರಂಗಲಿಂಗೇಶ್ವರ ಪುಣ್ಯಾಶ್ರಮ ಬೆಳೆದು ನಾಡಿಗೆ ಮಾದರಿಯಾಗಬೇಕು ಎಂದರು.

ತತ್ವಪದ ಸಾಹಿತ್ಯದ ಮೂಲಕ ಆಧ್ಯಾತ್ಮಿಕ, ವೈಚಾರಿಕ ಚಿಂತನೆಗಳನ್ನು ನೀಡಿದ ಕಲ್ಯಾಣ ಕರ್ನಾಟಕದ ಅಪರೂಪದ ಆಧ್ಯಾತ್ಮಿಕ ಚೇತನ ಅವಧೂತ ರಂಗಲಿಂಗೇಶ್ವರರು ಮನುಷ್ಯ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ಸಂತರಾಗಿದ್ದರು ಎಂದರು.

ರಂಗಲಿಂಗೇಶ್ವರರ ಕ್ಯಾಸೆಟ್ ಬಿಡುಗಡೆ ಮಾಡಿ ಮಾತನಾಡಿದ ಖ್ಯಾತ ವೈದ್ಯ ಡಾ. ಚಂದ್ರಶೇಖರ ಸುಬೇದಾರ್, ಎಲ್ಲ ಧರ್ಮ, ಸಿದ್ಧಾಂತಗಳ ತಿರುಳು ಒಂದೇ. ಮನುಷ್ಯ ಮನುಷ್ಯನಾಗಿ ಬದುಕುವುದು ಅಂತಹ ಮಾನವೀಯತೆಯಿಂದ ಬದುಕಿ ತೋರಿಸಿ, ಸತ್ಯ ಧರ್ಮದ ಬದುಕು ಶಾಶ್ವತ ಎಂದು ತೋರಿಸಿಕೊಟ್ಟ ರಂಗಲಿಂಗೇಶ್ವರರ ಜೀವನ ಚರಿತ್ರೆ ದಾರಿದೀಪವಾಗಿದೆ ಎಂದರು.

ಪ್ರಥಮ ದರ್ಜೆ ಗುತ್ತಿಗೆದಾರ ದೇವಿಂದ್ರಪ್ಪ ಗೌಡಗೇರಿ, ರಂಗಲಿಂಗೇಶ್ವರ ಪುಣ್ಯಾಶ್ರಮ ಅಭಿವೃದ್ಧಿಗೆ ಎಲ್ಲಾ ರೀತಿಯಿಂದ ಪ್ರೋತ್ಸಾಹ, ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಸಂಶೋಧಕ ಡಾ. ಮೋನಪ್ಪ ಶಿರವಾಳ ಅವರು ತತ್ವಪದ ಸಾಹಿತ್ಯ ಪರಂಪರೆ ಕುರಿತು ಮಾತನಾಡಿದರು.

ಗಮಕಿ ಕಲಾವಿದ ಕಾಳಪ್ಪ ಪತ್ತಾರ ಅವರಿಗೆ ಸಗರನಾಡಿನ ಶ್ರೇಷ್ಠ ಗಮಕಿ ಪ್ರಶಸ್ತಿ, ಡಾ. ಚಂದ್ರಶೇಖರ ಸುಬೇದಾರ ಅವರಿಗೆ ವೈದ್ಯಲೋಕದ ಧೃವತಾರೆ ಪ್ರಶಸ್ತಿ, ಡಾ. ಮೋನಪ್ಪ ಶಿರವಾಳ ಅವರಿಗೆ ಶ್ರೇಷ್ಠ ಸಂಶೋಧಕ ಪ್ರಶಸ್ತಿ, ಮಲ್ಲಿಕಾರ್ಜುನ ಮುದ್ನೂರ ಅವರಿಗೆ ಪತ್ರಿಕಾ ಕ್ಷೇತ್ರದ ಸಾಧಕ ಪ್ರಶಸ್ತಿ, ರಾಘವೇಂದ್ರ ಹಾರಣಗೇರಾ ಅವರಿಗೆ ಸಗರನಾಡಿನ ಸಾಂಸ್ಕೃತಿಕ ಧೃವತಾರೆ ಪ್ರಶಸ್ತಿ, ಹನುಮಯ್ಯ ಪಿಲಗುಂಡ ಅವರಿಗೆ ಸಂಗೀತ ಮಾಂತ್ರಿಕ ಪ್ರಶಸ್ತಿ, ಪ್ರಕಾಶ ದೊರೆ ಮುಡಬೂಳ ಅವರಿಗೆ ಪತ್ರಿಕಾ ಕ್ಷೇತ್ರದ ಸಾಧಕ ಪ್ರಶಸ್ತಿ, ಕು. ಅಭಿನಾವ ಮತ್ತು ಅಭಿರುಚಿ ಆಲ್ದಾಳ, ಅವರಿಗೆ ಕ್ರೀಡಾ ಪ್ರಶಸ್ತಿ, ತಿಪ್ಪಣ್ಣ ಜಾಧವ ಅವರಿಗೆ ಕಲಾ ಕುಂಚ ಪ್ರಶಸ್ತಿ ಮುಂತಾದ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತ್ರಿಶೂಲಪ್ಪ ಶರಣರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ತಾಲೂಕು ಮಹಾರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷ ಮರೆಪ್ಪ ಪ್ಯಾಟಿ ಮತ್ತು ಆರ್ಯುವೇದ ತೈಲ ಹಾಗೂ ಮುಖಂಡರಾದ ಶೇಖರ ದೊರೆ ಅವರು ಆರ್ಯುವೇದ ಚೂರ್ಣ ಬಿಡುಗಡೆ ಮಾಡಿದರು.

ಮಹಾದೇವಪ್ಪ ಸಾಲಿಮನಿ, ಸಣ್ಣನಿಂಗಪ್ಪ ನಾಯ್ಕೋಡಿ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ, ಬಸಲಿಂಗಪ್ಪ ಹವಾಲ್ದಾರ, ಪಿಡ್ಡಪ್ಪ ಚನ್ನೂರ, ರವಿ ಯಕ್ಷಿಂತಿ, ಡಾ. ಗೊವಿಂದರಾಜ ಆಲ್ದಾಳ, ಭಾಗ್ಯ ದೊರೆ, ಡಾ. ಈರಣ್ಣ ಹವಾಲ್ದಾರ, ರಂಗನಾಥ ದೊರೆ ಇದ್ದರು.

-----

ಫೋಟೋ: 12ವೈಡಿಆರ್1

ಶಹಾಪುರ ತಾಲೂಕಿನ ಮುಡಬೂಳ ಗ್ರಾಮದಲ್ಲಿ ಅವಧೂತ ರಂಗಲಿಂಗೇಶ್ವರರ 15ನೇ ವರ್ಷದ ಪುಣ್ಯಾರಾಧನೆ ನಿಮಿತ್ತ ಧರ್ಮಸಭೆ ಜರುಗಿತು.