ಕುಡಿಯುವ ನೀರು, ಮೇವು ಲಭ್ಯತೆ: ತಹಸೀಲ್ದಾರ ಪರಿಶೀಲನೆ

| Published : Mar 13 2024, 02:06 AM IST

ಕುಡಿಯುವ ನೀರು, ಮೇವು ಲಭ್ಯತೆ: ತಹಸೀಲ್ದಾರ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಲಿಕೊಪ್ಪ ಗ್ರಾಮಕ್ಕೆ ಮಂಗಳವಾರ ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಭೇಟಿ ನೀಡಿ, ಕುಡಿಯುವ ನೀರು, ಮೇವು ಲಭ್ಯತೆ ಹಾಗೂ ಇತರೆ ಸಮಸ್ಯೆಗಳ ಕುರಿತು ಪರೀಶೀಲನೆ ನಡೆಸಿದರು.

ಹುಬ್ಬಳ್ಳಿ:

ತಾಲೂಕಿನ ಪಾಲಿಕೊಪ್ಪ ಗ್ರಾಮಕ್ಕೆ ಮಂಗಳವಾರ ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಭೇಟಿ ನೀಡಿ, ಕುಡಿಯುವ ನೀರು, ಮೇವು ಲಭ್ಯತೆ ಹಾಗೂ ಇತರೆ ಸಮಸ್ಯೆಗಳ ಕುರಿತು ಪರೀಶೀಲನೆ ನಡೆಸಿದರು.ಈ ವೇಳೆ ಮಾತನಾಡಿದ ಅವರು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತಿದೆ. ಕೆರೆಗಳಲ್ಲಿ ಸಹ ನೀರಿನ ಕೊರತೆಯಿದೆ. ನೀರಿನ ಮೂಲಗಳಾದ ಕೊಳವೆ ಬಾವಿ, ಬಾವಿ, ಕೆರೆಗಳಲ್ಲಿ ನೀರು ಕಡಿಮೆಯಾಗಿದೆ. ತಾಲೂಕು ಆಡಳಿತದಿಂದ ಬಾಡಿಗೆ ರೂಪದಲ್ಲಿ ಖಾಸಗಿ ಕೊಳವೆ ಬಾವಿ ಕೊರೆಸಲು ಕ್ರಮಕೈಗೊಳ್ಳಲಾಗುವುದು. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಸಹ ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದರು.

ಬೇಸಿಗೆಯಲ್ಲಿ ದನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಬಹುದಾಗಿದೆ. ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುತ್ತಿದೆ. ಯಾವುದೇ ರೀತಿಯ ಮೇವಿನ ಕೊರತೆ ಬಗ್ಗೆ ವರದಿಯಾಗಿಲ್ಲ. ಅಲ್ಲದೇ ಮೇವಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡು, ಮೇವು ಬ್ಯಾಂಕ್‌ಗಳ ಮೂಲಕ ಮೇವು ಪೂರೈಸಲಾಗುವುದು. ಸಾರ್ವಜನಿಕರು ಯಾವುದೇ ಹಿಂಜರಿಕೆ ಮನೋಭಾವ ಹೊಂದದೇ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಬೇಕು ಎಂದರು.

ಇದೇ ವೇಳೆ ಬರ ಪರಿಸ್ಥಿತಿಯ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಗ್ರಾಪಂ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.