ಬನ್ನಾರಿ ಅಮ್ಮನ್ ಕಾರ್ಖಾನೆಯ ಒಪ್ಪಂದದಿಂದ ಹೊರಬರುವಂತೆ ಮಾಡಲಾಗಿತ್ತು. ನಂತರ ಬೇರೆ ಬೇರೆ ಕಾರ್ಖಾನೆಯವರು ಇಲ್ಲಿನ ರೈತರಿಂದ ಕಬ್ಬು ಖರೀದಿಸುವಂತಾಗಿತ್ತು

ಕನ್ನಡಪ್ರಭ ವಾರ್ತೆ ಬನ್ನೂರುಬನ್ನಾರಿ ಅಮ್ಮನ ಕಾರ್ಖಾನೆಯವರು ಆಯುಕ್ತರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಬೇರೆ ಕಾರ್ಖಾನೆಯವರು ಇಲ್ಲಿನ ಕಬ್ಬು ಖರೀದಿ ಮಾಡದಂತೆ ಮಾಡುವುದರ ಮೂಲಕ ಕಬ್ಬು ಬೆಳೆದು ನಿಂತಿದ್ದರೂ ಕಬ್ಬನ್ನು ಪಡೆಯದೇ ರೈತರನ್ನು ಆರ್ಥಿಕವಾಗಿ ತೊಂದರೆಗೆ ಒಳಪಡುವಂತೆ ಮಾಡುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ರಾಜ್ಯರೈತ ಸಂಘ ಮೂಲಸಂಘಟನೆಯ ವತಿಯಿಂದ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ನೇತೃತ್ವದಲ್ಲಿ ಬನ್ನಾರಿ ಅಮ್ಮನ್ ಕಚೇರಿಗೆ ಮುತ್ತಿಗೆ ಹಾಕಿದರು.ಬನ್ನೂರು ನಾರಾಯಣ್ ಮಾತನಾಡಿ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ 2023ರಲ್ಲಿ ಪ್ರತಿಭಟನೆಯನ್ನು ನಡೆಸಿ, ಮಂಡ್ಯ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸಕ್ಕರೆ ಆಯುಕ್ತರನ್ನು ಭೇಟಿ ಮಾಡಿ, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಬನ್ನಾರಿ ಅಮ್ಮನ್ ಕಾರ್ಖಾನೆಯ ಒಪ್ಪಂದದಿಂದ ಹೊರಬರುವಂತೆ ಮಾಡಲಾಗಿತ್ತು. ನಂತರ ಬೇರೆ ಬೇರೆ ಕಾರ್ಖಾನೆಯವರು ಇಲ್ಲಿನ ರೈತರಿಂದ ಕಬ್ಬು ಖರೀದಿಸುವಂತಾಗಿತ್ತು ಎಂದರು.ಇದೀಗ ಪುನಃ ಒಪ್ಪಂದದ ಸೂತ್ರ ಅನುಸರಿಸುತ್ತಿರುವ ಬನ್ನಾರಿ ಅಮ್ಮನ್ ಕಾರ್ಖಾನೆಯವರು ರೈತರಿಗೆ ತೊಂದರೆಯನ್ನು ನೀಡುತ್ತಿದ್ದಾರೆ. 13 ರಿಂದ 16 ತಿಂಗಳು ಕಳೆದರೂ ಕಬ್ಬು ಕಟಾವು ಆಗುತ್ತಿಲ್ಲ. ಸರ್ಕಾರ ಈಗಾಗಲೇ ನೀರು ನೀಡುವುದಿಲ್ಲ ಎಂದು ತಿಳಿಸಿದ್ದು, ಕಬ್ಬಿಗೆ ನೀರಿಲ್ಲದೇ ಹೋದಲ್ಲಿ ಕಬ್ಬು ಸಂಪೂರ್ಣವಾಗಿ ಹಾಳಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗುತ್ತದೆ. ಕಬ್ಬು ಕಟಾವು ವಿಳಂಬವಾಗುವುದರಿಂದ ಕಬ್ಬಿನ ಕೂಲಿ ಹೆಚ್ಚಾಗಿ ಇಳುವರಿ ನಷ್ಟವಾಗುತ್ತದೆ. ಎಕರೆಗೆ 25 ಸಾವಿರ ನಷ್ಟವಾಗುತ್ತದೆ ಎಂದು ಅವರು ತಿಳಿಸಿದರು.ಸರ್ಕಾರ ಹಾಗೂ ಜಿಲ್ಲಾಡಳಿತ ಸರಿಯದ ಸಮಯಕ್ಕೆ ಕಬ್ಬು ಕಟಾವು ಮಾಡಿಸಲು ಕ್ರಮ ಕೈಗೊಳ್ಳಬೇಕು. ಇಳುವರಿ ನಷ್ಟವನ್ನು ಕಾರ್ಖಾನೆಯ ಮಾಲೀಕರೇ ಭರಿಸಬೇಕು. ಕೂಲಿ 500 ಗಳಿಗಿಂತ ಹೆಚ್ಚಾದರೆ ಅದನ್ನು ಕಾರ್ಖಾನೆಯೇ ಭರಿಸಬೇಕು. ಕಚೇರಿಗೆ ನಾಮಫಲಕವನ್ನು ಅಳವಡಿಸುವಂತೆ ಅವರು ಅಗ್ರಹಿಸಿದರು.ಕಾರ್ಖಾನೆಯ ವ್ಯವಸ್ಥಾಪಕರು ಸ್ಥಳಕ್ಕೆ ಬಂದು ರೈತರ ಸಮಸ್ಯೆಯನ್ನು ಬಗೆಹರಿಸಬೇಕು. ಒಂದು ವಾರದ ಒಳಗೆ ರೈತರ ಸಮಸ್ಯೆಯನ್ನು ಬಗೆಹರಿಸದೇ ಇದ್ದಲ್ಲಿ ರೈತರು ಕಾರ್ಖಾನೆಗೆ ಮುತ್ತಿಗೆ ಹಾಕಿ, ಕಾರ್ಖಾನೆಯನ್ನು ವಶಕ್ಕೆ ಪಡೆಯಬೆಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಶಿವರಾಂ, ಕೃಷ್ಣ, ಮಲ್ಲೇಶ್, ವಿಶ್ವನಾಥ್, ಚಂದ್ರು, ಪುಟ್ಟಸ್ವಾಮಿ, ನಿಂಗೇಗೌಡ, ರಾಜು, ಪ್ರಕಾಶ, ಕೃಷ್ಣ, ದೇವರಾಜು, ಚಂದ್ರು, ರಮೇಶ್, ಶಂಕರ್, ಚನ್ನೇಗೌಡ, ಕಾಳೇಗೌಡ ಇದ್ದರು.