ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿಜಿಲ್ಲೆಯ ಹಲವು ತಾಲೂಕುಗಳಲ್ಲಿ ಹರಿಯುವ ಡೋಣಿ ನದಿ, ಮಳೆ ಬಂದರೆ ಇದರ ಪ್ರಭಾವ ಮಾತ್ರ ರೈತಾಪಿ ಜನರನ್ನು ಕಾಡುತ್ತಲೇ ಇದೆ. ಪ್ರತಿ ವರ್ಷ ಮಳೆ ಬಂದಾಗ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ನದಿ ಪಾತ್ರದ ಗ್ರಾಮಗಳ ಸಾವಿರಾರು ಎಕರೆ ಕೃಷಿ ಜಮೀನಿನಲ್ಲಿ ಮಣ್ಣು ಕೂಡ ಕೊಚ್ಚಿ ಹೋಗುತ್ತಿದೆ. ಇಲ್ಲಿ ಬೆಳೆದ ಬೆಳೆ ಡೋಣಿಗೆ ಅರ್ಪಣೆ ಮಾಡಬೇಕಾಗಿದೆ. ಕೂಡಲೇ ಸರ್ಕಾರ ಹಾಗೂ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಡೋಣಿ ನದಿ ತೀರದ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಶಂಕರಗೌಡ ಹಿರೇಗೌಡ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಸ್ಯೆ ನಿನ್ನೆ ಮೊನ್ನೆಯದ್ದಲ್ಲ. 2004ರಿಂದಲೂ ಶುರುವಾಗಿದೆ. ಡೋಣಿ ನದಿಯ ಹೂಳೆತ್ತಬೇಕು ಎಂದು ಕಳೆದ ಎರಡು ದಶಕಗಳಿಂದ ರೈತರು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ ಹೋರಾಟಕ್ಕೆ ಜಯ ಮಾತ್ರ ಸಿಕ್ಕಿಲ್ಲ. ಪ್ರತಿ ಚುನಾವಣೆ ಬಂದಾಗ ಜನಪ್ರತಿನಿಧಿಗಳು ಡೋಣಿ ನದಿ ಹೂಳೆತ್ತುವ ಭರವಸೆ ನೀಡುತ್ತಾರೆಯೇ ಹೊರತು ಭರವಸೆ ಮಾತ್ರ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರವಾಹ ಬಂದಾಗ ಡೋಣಿ ನದಿಯಿಂದ ಸಾತಹಾಳ, ಸಾರವಾಡ, ಹೊನವಾಡ, ತಾಳಿಕೋಟೆ, ತಿಕೋಟಾ, ಬಾಬಾನಗರ, ಬಿಜ್ಜರಗಿ ಸೇರಿದಂತೆ ಹತ್ತು ಹಲವು ಹೋಬಳಿಗಳು ತೀವ್ರ ಸಂಕಷ್ಟಕ್ಕೆ ಸಿಲುಕುತ್ತವೆ. 2004, 2008ರಲ್ಲಿ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಪ್ರವಾಹ ಬಂದಾಗ ಹಲವು ಗ್ರಾಮಗಳಿಗೆ ನೀರು ನುಗ್ಗಿತ್ತು. ಹೂಳೆತ್ತದ ಕಾರಣ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಡೋಣಿ ನದಿ ಹೊಲಗಳತ್ತ ನುಗ್ಗಿ ಬರುತ್ತಿದೆ. ಇದರಿಂದ ಜಮೀನಿನಲ್ಲಿ ಬೆಳೆದಿರುವ ಬೆಳೆ ಹಾಳಾಗುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಿವಶರಣ ಅವರಾಧಿ, ತಾಲೂಕು ಅಧ್ಯಕ್ಷ ರಾಮು ದೇಸಾಯಿ, ತಾಲೂಕಿನ ಗೌರವಾಧ್ಯಕ್ಷ ಬಸನಗೌಡ ಬಿರಾದಾರ ಸೇರಿದಂತೆ ತಾಲೂಕಿನ ಎಲ್ಲ ರೈತ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಉಪಸ್ಥಿತರಿದ್ದರು.ಬ--------
ಹೂಳೆತ್ತದಿದ್ದರೆ ಹೋರಾಟದ ಎಚ್ಚರಿಕೆಡೋಣಿ ನದಿಗೆ ಪ್ರವಾಹ ಬಂದರೆ ಪ್ರತಿ ಸಲ ಕನಿಷ್ಠ 2 ಸಾವಿರ ಹೆಕ್ಟೇರ್ ಕೃಷಿ ಭೂಮಿ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದ ಮತ್ತೊಮ್ಮೆ ಡೋಣಿ ನದಿ ತುಂಬಿ ಹರಿಯುತ್ತಿದೆ. ರೈತರು ಬೆಳೆದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಈಗಲಾದರೂ ಸರ್ಕಾರ ಇತ್ತ ಗಮನಹರಿಸಿ ಡೋಣಿ ನದಿಯ ಹೂಳೆತ್ತುವ ಕಾಮಗಾರಿ ಆರಂಭಿಸಿ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರನ್ನು ಸಂಘಟಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು. ಡೋಣಿ ಬೆಳೆದರ ಊರೆಲ್ಲಾ ಕಾಳು ಎಂದು ಹಿರಿಯರ ಅಲಿಖಿತ ನಾಣ್ನುಡಿ ಈ ಭಾಗದಲ್ಲಿ ಇತ್ತು. ಆದರೆ ಈಗ 15-20 ವರ್ಷದಿಂದ ಡೋಣಿ ತುಂಬಿದರೆ, ಊರೆಲ್ಲಾ ಪ್ರವಾಹ ಎನ್ನುವಂತಾಗಿದೆ. ಈ ಭಾಗದ ರೈತರ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೆರವಾಗಬೇಕಾಗಿದೆ ಎಂದು ಶಂಕರಗೌಡ ಹಿರೇಗೌಡ ಹೇಳಿದರು.