ಮಾದಕ ವಸ್ತು ಸೇವನೆ ತ್ಯಜಿಸಿ, ಉತ್ತಮ ಜೀವನ ಶೈಲಿ ಅಳವಡಿಸಿ

| Published : Aug 23 2024, 01:07 AM IST / Updated: Aug 23 2024, 01:08 AM IST

ಸಾರಾಂಶ

ಆರೋಗ್ಯ ಕಾಪಾಡುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು

ಗದಗ: ಎಲ್ಲರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರು ತಂಬಾಕು ವ್ಯಸನ ಮಾದಕ ವಸ್ತುಗಳ ಸೇವನೆ ತ್ಯಜಿಸಿ ಒಳ್ಳೆಯ ಆಹಾರ ಸೇವಿಸಿ ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಥೋಡ್ ಹೇಳಿದರು.

ಅವರು ಗದಗ ಬೆಟಗೇರಿ ನಗರಸಭೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ಜಿಲ್ಲಾ ಎನ್.ಸಿ.ಡಿ. ವಿಭಾಗ, ಎನ್.ಟಿ.ಈ.ಪಿ.ಕಾರ್ಯಕ್ರಮ, ನಗರ ಸಭೆ ಸಂಯುಕ್ತಾಶ್ರಯದಲ್ಲಿ ಜರುಗಿದ ಪೌರಕಾರ್ಮಿಕರಿಗೆ ಆರೋಗ್ಯದ ಅರಿವು ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಅಸಾಂಕ್ರಾಮಿಕ ಕಾಯಿಲೆಗಳು ಹೆಚ್ಚುತ್ತಿದ್ದು, ಇದಕ್ಕೆ ಮುಖ್ಯ ಕಾರಣ ತಂಬಾಕು ವ್ಯಸನ ಮಾದಕ ವಸ್ತುಗಳ ಸೇವನೆ ಆಹಾರ ಪದ್ಧತಿ ಹಾಗೂ ಜೀವನ ಶೈಲಿ. ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಪ್ಯಾರಲೈಸೀಸ್, ಡಯಾಬಿಟೀಸ್, ಟಿ.ಬಿ.ಎಂಬ ಮಾರಕ ಕಾಯಿಲೆಗಳಿಗೆ ಬಲಿಯಾಗುತ್ತಿದ್ದು ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು ಎಲ್ಲರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದರು.

ನಗರಸಭೆಯ ಪರಿಸರ ಅಭಿಯಂತ ಆನಂದ ಬದಿ ಮಾತನಾಡಿ, ಪೌರ ಕಾರ್ಮಿಕ ಸಿಬ್ಬಂದಿಗಳಿಗೆ ಈ ರೀತಿಯ ಆರೋಗ್ಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಅವಶ್ಯಕ ಹಾಗೂ ಉಪಯುಕ್ತವಾಗಿದ್ದು, ಎಲ್ಲ ಪೌರ ಕಾರ್ಮಿಕ ಸಿಬ್ಬಂದಿಗಳು ಕಾರ್ಯಕ್ರಮ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಗೋಪಾಲ ಸುರಪುರ ಮಾತನಾಡಿ, ತಂಬಾಕು ಸೇವನೆಯಿಂದಾಗುವ ದುಷ್ಟಪರಿಣಾಮ ತಿಳಿಸಿ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ2003ರ ಕುರಿತು ಮಾಹಿತಿ ನೀಡಿದರು.

ಆಪ್ತ ಸಮಾಲೋಚಕಿ ರೇಷ್ಮಾ ಬೇಗಂ ನದಾಫ್ ತಂಬಾಕು ವ್ಯಸನದಿಂದ ಮುಕ್ತವಾಗಲು ಮಲ್ಲಸಮುದ್ರದ ಗದಗ ಜಿಲ್ಲಾಸ್ಪತ್ರೆಯ ರೂಂ. ನಂ.182 ರಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು, ಗಣೇಶ ಬಿ. ಕ್ಷಯರೋಗ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಎಲ್ಲ ಪೌರ ಕಾರ್ಮಿಕ ಸಿಬ್ಬಂದಿಗಳಿಗೆ ಬಾಯಿ ಕ್ಯಾನ್ಸರ್, ಹೈಪರ್ ಟೆನ್‌ಷನ್, ಸಕ್ಕರೆ ಕಾಯಿಲೆ ತಪಾಸಣೆ ಮಾಡಲಾಯಿತು,

ಡಾ. ರವಿ ಕಡಗಾವಿ, ಡಾ. ಮಹೇಶ. ನಗರಸಭೆ ಹಿ.ಆ. ನಿರೀಕ್ಷಕರು ಎಂ.ಎಂ. ಮಕಾಂದಾರ, ನಿರೀಕ್ಷಣಾಧಿಕಾರಿ ವೈ.ಎನ್.ಕಡೆಮನಿ, ಡಾ. ಸೌಮ್ಯ, ಡಾ.ಬಸವರಾಜ ಶೆಟ್ಟರ್, ಡಾ. ಮಂಜುನಾಥ, ಪ್ರವೀಣ, ಬಸಮ್ಮ ಚಿತ್ತರಗಿ, ಶಿವಕುಮಾರ ಬಗಾಡೆ, ಪೈಯಾಜ್ ಮಕಾಂದಾರ ಮುಂತಾದವರು ಹಾಜರಿದ್ದರು.