ಸೊಳ್ಳೆ ಕಡಿತದಿಂದ ಪಾರಾಗಿ, ಡೆಂಘೀಯಿಂದ ದೂರಾಗಿ

| Published : Jul 04 2024, 01:02 AM IST

ಸಾರಾಂಶ

ಸೊಳ್ಳೆ ಕಡಿತದಿಂದ ಪಾರಾಗುವುದೊಂದೇ ಡೆಂಘೀ ರೋಗ ನಿಯಂತ್ರಣಕ್ಕೆ ಇರುವ ಮುಖ್ಯದಾರಿ. ಹೀಗಾಗಿ ಮೊದಲು ಸೊಳ್ಳೆಗಳ ನಿಯಂತ್ರಣದ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಎಫ್.ಮಾಯಾಚಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಮತಗಿ

ಸೊಳ್ಳೆ ಕಡಿತದಿಂದ ಪಾರಾಗುವುದೊಂದೇ ಡೆಂಘೀ ರೋಗ ನಿಯಂತ್ರಣಕ್ಕೆ ಇರುವ ಮುಖ್ಯದಾರಿ. ಹೀಗಾಗಿ ಮೊದಲು ಸೊಳ್ಳೆಗಳ ನಿಯಂತ್ರಣದ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಎಫ್.ಮಾಯಾಚಾರಿ ಹೇಳಿದರು.

ಸಮೀಪದ ಶಿರೂರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬಿವಿವಿ ಸಂಘದ ನರ್ಸಿಂಗ್‌ ಮಹಾವಿದ್ಯಾಲಯ ಬಾಗಲಕೋಟ ಇವರ ಸಂಯುಕ್ತಾಶ್ರಯದಲ್ಲಿ ಡೆಂಘೀ ಜ್ವರದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡೆಂಘೀ ಜ್ವರ ಈಡಿಸ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಜ್ವರ, ಕಣ್ಣು ಕೆಂಪಾಗುವಿಕೆ, ಸ್ನಾಯು ನೋವು, ಕೀಲು ಮತ್ತು ಸಂದಿಗಳಲ್ಲಿ ನೋವು ಈ ರೋಗದ ಪ್ರಮುಖ ಲಕ್ಷಣಗಳು. ಇವು ಕಂಡುಬಂದರೆ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಅಲ್ಲದೆ ಮುಂಜಾಗೃತವಾಗಿ ಮೈತುಂಬ ಬಟ್ಟೆ ಧರಿಸುವುದು ಹಾಗೂ ಮಲಗುವಾಗ ಸೊಳ್ಳೆ ಪರದೆ ಬಳಸುವುದು. ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತೆರೆದಿಟ್ಟ ನೀರಿನ ತೊಟ್ಟಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಪುನಃ ಭರ್ತಿಮಾಡಿ ಮುಚ್ಚಳದಿಂದ ಭದ್ರವಾಗಿ ಮುಚ್ಚಬೇಕು. ಡೆಂಘೀ ಸೊಳ್ಳೆಗಳು ಶುದ್ಧ ಮತ್ತು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ ಎಂದು ತಿಳಿಸಿಕೊಟ್ಟರು.ನಂತರ ಬಿವಿವಿ ಸಂಘದ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಪಟ್ಟಣದಲ್ಲಿನ ಮನೆ ಮನೆಗಳಿಗೆ ಭೇಟಿ ನೀಡಿ ಡೆಂಘೀ ರೋಗದ ಕುರಿತು ಜಾಗೃತಿ ಮೂಡಿಸಿದರು. ಎಲ್ಲರ ಸಹಭಾಗಿತ್ವದೊಂದಿಗೆ ಡೆಂಘೀ ಸೋಲಿಸೋಣ ಎಂಬ ಘೋಷಣೆ ಕೂಗುತ್ತ ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ, ಡೆಂಘೀನಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ, ಸೊಳ್ಳೆ ಇಲ್ಲ ಅಂದರೆ ಡೆಂಘೀ ಇಲ್ಲ, ರಕ್ಷಣೆ ಸುರಕ್ಷತೆಯ ಕೀಲಿಯಾಗಿದೆ ಎಂದು ಘೋಷಣೆ ಕೂಗುತ್ತಾ ಜಾಗೃತಿ ಮೂಡಿಸಿದರು.ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ನರ್ಸಿಂಗ್‌ ಮಹಾವಿದ್ಯಾಲಯದ ಸಿಬ್ಬಂದಿ ಲಕ್ಷ್ಮೀ ಗೊಂದಿ, ಮಹೇಶ ವಾಂಗಿ, ಶಿರೂರದ ಶಿವಗಂಗಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎಂ.ಸಿ.ಕೋರಿ, ಈರಣ್ಣ ಬಿದರಿ ಹಾಗೂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರದ ಸಿಬ್ಬಂದಿ ಎಂ.ಎಂ.ಸಿಂದಗಿ, ಎ.ಬಿ.ಪೂಜಾರಿ ಇದ್ದರು.