ಪ್ಲಾಸ್ಟಿಕ ತ್ಯಜಿಸಿ ಪರಿಸರ ಉಳಿಸಿ: ನ್ಯಾಯಾಧೀಶ ಪರಮೇಶ್ವರ

| Published : Jun 06 2024, 12:32 AM IST

ಸಾರಾಂಶ

ಆಧುನಿಕತೆಯಿಂದ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರ ಹಾಳು ಮಾಡುತ್ತಿದ್ದಾನೆ. ಅಲ್ಲದೇ ಪರಿಸರದ ಕುರಿತು ಜನರಲ್ಲಿ ಕಾಳಜಿ ಕಡಿಮೆಯಾಗುತ್ತಿದೆ. ಇಂದು ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದೇವೆ.

ಹುಬ್ಬಳ್ಳಿ;

ಜನರು ಪ್ಲಾಸ್ಟಿಕ್ ಬಳಕೆ ಕಡೆಗಣಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಹೇಳಿದರು.

ಅವರು ಇಲ್ಲಿನ ವಿದ್ಯಾನಗರದ ಹೊಸ ಕೋರ್ಟ್ ಆವರಣದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹುಬ್ಬಳ್ಳಿ, ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

1973ರಲ್ಲಿ ವಿಶ್ವಸಂಸ್ಥೆಯು ಮೊದಲ ಬಾರಿಗೆ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಹಿತದೃಷ್ಟಿಯಿಂದ ವಿಶ್ವದಾದ್ಯಂತ ವಿಶ್ವ ಪರಿಸರ ದಿನ ಆಚರಿಸಲಾಯಿತು. ಪ್ರಸ್ತುತ 173 ದೇಶಗಳಲ್ಲಿ ಪರಿಸರ ದಿನ ಆಚರಿಸಲಾಗುತ್ತಿದೆ. ಪರಿಸರ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಪರಿಸರ ಹಾಳು ಮಾಡದಂತೆ ತಡೆಯುವುದು ವಿಶ್ವ ಪರಿಸರ ದಿನದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

ಆಧುನಿಕತೆಯಿಂದ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರ ಹಾಳು ಮಾಡುತ್ತಿದ್ದಾನೆ. ಅಲ್ಲದೇ ಪರಿಸರದ ಕುರಿತು ಜನರಲ್ಲಿ ಕಾಳಜಿ ಕಡಿಮೆಯಾಗುತ್ತಿದೆ. ಇಂದು ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದೇವೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ, ಕೆರೆ, ಕೊಳ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಎಸೆಯುತ್ತಿದ್ದೇವೆ. ಇದರಿಂದಾಗಿ ಪರಿಸರ ಹಾಳಾಗುತ್ತಿದೆ. ತ್ಯಾಜ್ಯ ಎಸೆಯುವವರ ಮೇಲೆ ಸಂಬಂಧಪಟ್ಟ ಮಹಾನಗರ ಪಾಲಿಕೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಅವಶ್ಯಕತೆ, ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಪ್ಲಾಸ್ಟಿಕ್ ಬಳಕೆ ಮಾಡಬೇಕು. ಕೆರೆ, ರಸ್ತೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಜನರು ತ್ಯಾಜ್ಯವನ್ನು ಹಾಕದಂತೆ ಅಧಿಕಾರಿಗಳು ಕ್ರಮ ವಹಿಸಬೇಕಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಬಾಣದ ಮಾತನಾಡಿ, ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಹಾಗೆ ಪರಿಸರದ ಕಾಳಜಿ ವಹಿಸಬೇಕು. ಸಾಲು ಮರದ ತಿಮ್ಮಕ್ಕ ಅವರ ಮನೋಭಾವನೆ ಎಲ್ಲರಲ್ಲಿಯೂ ಮೂಡಬೇಕಿದೆ. ದುಡಿದ ಹಣವನ್ನು ಆಸ್ಪತ್ರೆಗೆ ಹಾಕುವ ಬದಲು ಸಸಿ ನೆಡುವ ಮೂಲಕ ಆರೋಗ್ಯ ಕಾಪಾಡಿಕೊಂಡು ಹಣ ಉಳಿತಾಯ ಮಾಡಬಹುದು. ವಿಶ್ವ ಪರಿಸರ ದಿನ ಜೂ. 5ಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿಯೊಂದು ಗ್ರಾಮ, ನಗರ ಪ್ರದೇಶದ ಜನರಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.

ವಲಯ ಅರಣ್ಯ ಅಧಿಕಾರಿ ಆರ್.ಎಸ್. ಉಪ್ಪಾರ ಮಾತನಾಡಿದರು. ಇದೇ ವೇಳೆ ನೃಪತುಂಗ ಬೆಟ್ಟ, ಗಬ್ಬೂರು ಹಾಗೂ ವಿವಿಧ ಪ್ರದೇಶಗಳಲ್ಲಿ 1001 ಸಸಿಗಳ ನೆಡುವಿಕೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅಲ್ಲದೇ ಸಾಂಕೇತಿಕವಾಗಿ ಸಸಿ ವಿತರಿಸಲಾಯಿತು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರಭುಲಿಂಗ ಗಡ್ಡದ, ಅರಣ್ಯ ಅಧಿಕಾರಿ ಪ್ರಕಾಶ ಕರಗುಪ್ಪಿ, ಹುಬ್ಬಳ್ಳಿ ನ್ಯಾಯಾಲಯದ ನ್ಯಾಯಾಧೀಶರು, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು‌. ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ರಾಜಶೇಖರ ತಿಳಗಂಜಿ ನಿರೂಪಿಸಿ, ವಂದಿಸಿದರು.