ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು ಲೊಕ್ಕನಹಳ್ಳಿ ಹೋಬಳಿಯ ವಿವಿಧಡೆ ಜಮೀನುಗಳಿಗೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕಾಡಂಚಿನ ಗ್ರಾಮಗಳಲ್ಲಿ ನಾಗರಿಕರು ಭಯದಿಂದ ಬದುಕುವಂತಾಗಿದೆ. ಈ ನಿಟ್ಟಿನಲಿ ವನ್ಯಪ್ರಾಣಿಗಳ ಉಪಟಳ ನಿಯಂತ್ರಿಸುವಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಬಿಆರ್‌ಟಿ ಹಾಗೂ ಮಲೆ ಮಹದೇಶ್ವರ ವನ್ಯಧಾಮದ ಡಿಎಫ್ಒಗಳ ಮುಂದೆ ರೈತರು ಆಗ್ರಹ ವ್ಯಕ್ತಪಡಿಸಿದರು.ಹನೂರು ತಾಲೂಕಿನ ಲೊಕ್ಕನಹಳ್ಳಿ ಅರಣ್ಯ ಇಲಾಖೆಯ ಕಚೇರಿ ಬಳಿ ಬಿಆರ್‌ಟಿ, ಡಿಎಫ್‌ಒ ದೀಪಾಕಂಟ್ರಾಕ್ಟರ್ ಹಾಗೂ ಮಲೆಮಹದೇಶ್ವರ ಡಿಎಫ್ಒ ಸಂತೋಷ್ ಕುಮಾರ್ ಸಮ್ಮುಖದಲ್ಲಿ ರೈತರ ಸಭೆಯನ್ನು ಕರೆಯಲಾಗಿತ್ತು. ಲೊಕ್ಕನಹಳ್ಳಿ ಹೋಬಳಿ ಅರಣ್ಯದಂಚಿನ ಜಮೀನುಗಳಿಗೆ ಪದೇ ಪದೇ ಕಾಡು ಪ್ರಾಣಿಗಳು ಲಗ್ಗೆ ಇಟ್ಟು ಮುಸುಕಿನ ಜೋಳ, ಅರಿಶಿಣ, ಈರುಳ್ಳಿ, ಆಲೂಗಡ್ಡೆ ವಿವಿಧ ಬೆಳೆಗಳನ್ನು ನಾಶಪಡಿಸುತ್ತಿರುವುದಲ್ಲದೆ ಕ್ರೂರ ಪ್ರಾಣಿ ಚಿರತೆಗಳು ಸಹ ಲಗ್ಗೆ ಇಟ್ಟು ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಿವೆ. ಕಾಡು ಪ್ರಾಣಿಗಳ ಉಪಟಳಕ್ಕೆ ಶಾಶ್ವತವಾಗಿ ಕಡಿವಾಣ ಹಾಕಿ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.ಅರಣ್ಯದೊಳೆಗೆ ನೀರಿನ ಸಮಸ್ಯೆ ಉಂಟಾಗಿದ್ದು ಕಾಡು ಪ್ರಾಣಿಗಳು ನೀರನ್ನು ಹುಡುಕಿ ಗ್ರಾಮಗಳ ಸಮೀಪವೆ ಆಗಮಿಸಿ ಜಮೀನುಗಳಿಗೆ ನುಗ್ಗಿ ದಾಂಧಲೆ ಮಾಡಲು ಮುಂದಾಗುತ್ತಿದ್ದು ಕಾಡಿನೊಳಗೆ ಪ್ರಾಣಿಗಳ ದಾಹ ನೀಗಿಸಲು ಅಗತ್ಯ ಕ್ರಮಕೈಗೊಳ್ಳಿ ಎಂದು ಸ್ಥಳೀಯ ರೈತರು ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದರು.
ಜಮೀನಿಗೆ ತೆರಳಲು ಭಯ ಮಹಿಳೆಯ ಆಳಲು:ರೈತ ಮಹಿಳೆ ಬಸಮ್ಮ ಮಾತನಾಡಿ ಸೇಬಿನಕೊಬೆಯ ಅರಣ್ಯದಂಚಿನಲ್ಲೇ ನಮ್ಮ ಜಮೀನು ಇದ್ದು, ಹಲವು ವರ್ಷಗಳಿಂದಲೂ ಬೇಸಾಯವನ್ನೇ ನಂಬಿ ಜೀವನ ಮಾಡುತ್ತಿದ್ದೇವೆ. ಆದರೆ ಕಳೆದ ತಿಂಗಳಿಂದ ಜಮೀನಿಗೆ ಕಾಡಾನೆಗಳ ಉಪಟಳ ನಿರಂತರವಾಗಿದ್ದು. ಆನೆ ತೆಂಗಿನ ಮರವನ್ನು ಮುರಿದಿರುವ ಜೊತೆಗೆ ಅಪಾರ ಪ್ರಮಾಣದ ಫಸಲನ್ನು ನಾಶಪಡಿಸಿದೆ. ಅಲ್ಲದೆ ಚಿರತೆಗಳ ನಿರಂತರ ಉಪಟಳದಿಂದ ಹಗಲಿನ ಸಮಯದಲ್ಲೂ ಕೂಡ ಜಮೀನಿಗೆ ತೆರಳಲು ತುಂಬಾ ಭಯವಾಗುತ್ತಿದೆ ಎಂದು ಸಮಸ್ಯೆ ಬಗೆಹರಿಸಲು ಕೋರಿದರು.ಬಿಆರ್‌ಟಿ ವನ್ಯಧಾಮದ ಡಿಎಫ್ಒ ದೀಪಾ ಜೆ ಕಂಟ್ರಾಕ್ಟರ್ ಮಾತನಾಡಿ ಮಳೆ ಕೊರತೆಯಿಂದಾಗಿ ಕಾಡಿನ ಪ್ರದೇಶ ವ್ಯಾಪ್ತಿಯ ಹಳ್ಳಕೊಳ್ಳಗಳು ಬತ್ತಿ ಹೋಗಿದ್ದು, ವನ್ಯ ಪ್ರಾಣಿಗಳ ದಾಹ ನೀಗಿಸಲು ಅಗತ್ಯ ಕ್ರಮಕೈಗೂಳ್ಳುವ ಜೊತೆಗೆ ನಮ್ಮ ಹಂತದಲ್ಲಾಗುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಈಗಾಗಲೆ ಮಲೆಮಹದೇಶ್ವರ ವನ್ಯಧಾಮಕ್ಕೆ 2.5 ಕೀಮಿ, ಬಿಆರ್‌ಟಿ ಅರಣ್ಯ ವ್ಯಾಪ್ತಿಯಲ್ಲಿ ೫ ಕೀಮೀ, ಕಾವೇರಿ ವನ್ಯಧಾಮದಲ್ಲಿ 21 ಕೀಮಿ ರೈಲ್ವೆ ಬ್ಯಾರಿಕೇಟ್ ನೀರ್ಮಾಣದ ಕಾರ್ಯ ಪ್ರಗತಿಯಲ್ಲಿದ್ದು ಮುಂದಿನ ದಿನಗಳಲ್ಲಿ ಈ ಭಾಗದ ಅರಣ್ಯ ಪ್ರದೇಶಗಳಲ್ಲೂ ಕೂಡ ಹೆಚ್ಚುವರಿ ಬ್ಯಾರಿಕೇಟ್ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ಮನವಿ ಸಲ್ಲಿಸಿ ಹೆಚ್ಚಿನ ಅನುದಾನ ಪಡೆದು ಕ್ರಮ ಜರುಗಿಸಲಾಗುವುದು ಎಂದರು . ಕಾಡಂಚಿನ ರೈತರ ಜಮೀನುಗಳಿಗೆ ಕಾಡುಪ್ರಾಣಿಗಳು ಬರದಂತೆ ಅರಣ್ಯ ಅಧಿಕಾರಿಗಳು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಜೊತೆಗೆ ಬೆಳೆ ನಷ್ಟ ಪರಿಹಾರ ತುರ್ತಾಗಿ ರೈತರಿಗೆ ನೀಡಬೇಕು. ಕಾಡುಪ್ರಾಣಿಗಳು ರೈತರ ಜಮೀನಿಗೆ ಬಂದಾಗ ಅಧಿಕಾರಿಗಳು ತೆರಳಿ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸ್ಪಂದಿಸಬೇಕು ಎಂದು ಅಧಿಕಾರಿಗಳ ಸಮ್ಮುಖದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ತಿಳಿಸಿದರು. ಈ ಸಂದರ್ಭದಲ್ಲಿ ಮಲೆ ಮಾದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಸಂತೋಷ್ ಕುಮಾರ್ ಎಸಿಎಫ್ ಶ್ರೀ ಕಾಂತ್, ಆರ್‌ಎಫ್ಓ ವಾಸು, ಶಿವರಾಮ್ಯ, ಹನೂರು ಪೋಲಿಸ್ ಇನ್ಸಪೆಕ್ಟರ್ ಶಶಿಕುಮಾರ್, ಸಬ್ ಇನ್ಸಪೆಕ್ಟರ್ ರೀಹಾನ್ ಬೇಗಮ್, ರೈತ ಸಂಘದ ಅದ್ಯಕ್ಷ ಚಂಗಡಿ ಕರಿಯಪ್ಪ, ಕಾರ್ಯದರ್ಶಿ ಶಾಂತ್ ಕುಮಾರ್ ನವೀನ್ ಸೇರಿದಂತೆ ಹಲವರು ಹಾಜರಿದ್ದರು.