ಕಂಬಳದಿಂದ ಧಾರ್ಮಿಕತೆ ಜಾಗೃತಿ: ಪ್ರಹ್ಲಾದ್‌ ಜೋಷಿ

| Published : Mar 17 2025, 12:33 AM IST

ಸಾರಾಂಶ

ಕಾರ್ಕಳ ತಾಲೂಕಿನ ಮಿಯ್ಯಾರು ಕಂಬಳ ಸಮಿತಿ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಸಹಯೋಗದೊಂದಿಗೆ 21ನೇ ವರ್ಷದ ಐತಿಹಾಸಿಕ ಮಿಯ್ಯಾರು ಲವ-ಕುಶ ಜೋಡುಕರೆ ಬಯಲು ಕಂಬಳ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ತುಳುನಾಡಿನಲ್ಲಿ ಕಂಬಳವೆಂದರೆ ಇಲ್ಲಿನ ಪ್ರತಿಷ್ಠೆ ಹಾಗೂ ಮರ್ಯಾದೆಯ ವಿಚಾರ. ಅದೊಂದು ಭಾವನಾತ್ಮಕ ಸಂಬಂಧವಾಗಿದೆ. ಕಂಬಳ ಹಾಗೂ ಕುಂಭಮೇಳಗಳು ದೇಶದಲ್ಲಿ ಸಾಂಸ್ಕೃತಿಕ ಪುನರುತ್ಥಾನದ ಜೊತೆ ಧಾರ್ಮಿಕತೆ ಜಾಗೃತವಾಗುವ ಕೆಲಸವನ್ನು ಮಾಡುತ್ತಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

ಕಾರ್ಕಳ ತಾಲೂಕಿನ ಮಿಯ್ಯಾರು ಕಂಬಳ ಸಮಿತಿ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಸಹಯೋಗದೊಂದಿಗೆ ನಡೆಯುವ 21ನೇ ವರ್ಷದ ಐತಿಹಾಸಿಕ ಮಿಯ್ಯಾರು ಲವ-ಕುಶ ಜೋಡುಕರೆ ಬಯಲು ಕಂಬಳದಲ್ಲಿ ಶನಿವಾರ ರಾತ್ರಿ ಭಾಗವಹಿಸಿ ಅವರು ಮಾತನಾಡಿದರು.

ಕಂಬಳ ಕ್ರೀಡೆಯು ಜಾತಿ- ಮತ- ಪಂಥವನ್ನು ಮೀರಿದ್ದು, ಎಲ್ಲರೂ ಒಗ್ಗೂಡಿ ಇದನ್ನು ಸಾಂಸ್ಕೃತಿಕ ಉತ್ಸವವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಕಾಲಕಾಲಕ್ಕೆ ಆಧುನಿಕತೆಯ ಹೊಸ ಸ್ಪರ್ಶವನ್ನು ನೀಡುವ ಕಾರ್ಯ ಕಂಬಳದಲ್ಲಿ ಆಗುತ್ತಿದೆ ಎಂದರು.ಕಾರ್ಕಳ ಶಾಸಕ ಮಾಜಿ ಸಚಿವ, ಕಂಬಳ ಸಮಿತಿ ಅಧ್ಯಕ್ಷ ವಿ.ಸುನಿಲ್ ಕುಮಾರ್ ಮಾತನಾಡಿ, ಪ್ರವಾಸೋದ್ಯಮ ದೃಷ್ಟಿಯಿಂದ ಕಂಬಳ ತುಂಬಾ ಮಹತ್ವ ಪಡೆದಿದೆ. ಸರ್ಕಾರ ಹೆಚ್ಚಿನ ಅನುದಾನ ಮೀಸಲಿಟ್ಟಾಗ ಜನಪದ ಕ್ರೀಡೆ ಬೆಳೆಯಲು ಸಾಧ್ಯ. ಮನೆಯ ಮಗುವಿನಂತೆ ಕೋಣಗಳನ್ನು ಸಾಕಿ ಬೆಳೆಸಿಕೊಂಡು ಕಂಬಳವನ್ನು ಉಳಿಸುವ ಪ್ರಯತ್ನ ತುಳುನಾಡಿನ ಜಿಲ್ಲೆಯ ಜನ ಮಾಡುತ್ತಿದ್ದಾರೆ ಎಂದರು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಜತೆಯಲ್ಲಿ ಕಂಬಳ ಸಾಧಕರು, ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.

ಕಂಬಳ ಸಮಿತಿ ಪದಾಧಿಕಾರಿಗಳಾದ ಕಾರ್ಕಳ ಜೀವನ್‌ದಾಸ್ ಅಡ್ಯಂತಾಯ, ಗುಣಪಾಲ ಕಡಂಬ, ಉದಯ್ ಕುಮಾರ್ ಶೆಟ್ಟಿ, ಮಹಾರಾಷ್ಟ್ರ ಶಾಸಕ ಸುನಿಲ್ ಕಾಂಬ್ಳಿ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಯಶ್ಪಾಲ್ ಸುವರ್ಣ, ದೇವಿಪ್ರಸಾದ್ ಶೆಟ್ಟಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಜಿಲ್ಲಾ ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್ ಎಚ್.ಪಿ., ಎಎಸ್ಪಿ ರಾಘವೇಂದ್ರ, ಬೈಂದೂರು ದೀಪಕ್ ಶೆಟ್ಟಿ, ಅಜಿತ್ ಹೆಗ್ಡೆ, ಫೋಕಸ್ ರಾಘು, ಶುಭದರಾವ್, ಸುನೀಲ್ ಬಜಗೋಳಿ, ಅಂತೋನಿ ಡಿಸೋಜ ನಕ್ರೆ, ಅವಿನಾಶ್ ಶೆಟ್ಟಿ, ಮಲ್ಲಿಕಾ ಯಶವಂತ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಮಾಜಿ ಇಸ್ರೊ ವಿಜ್ಞಾನಿ ಜನಾರ್ದನ ಇಡ್ಯಾ, ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ನವೀನ್ ನಾಯಕ್, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಸಭೆಯಲ್ಲಿದ್ದ ಗಣ್ಯರಿಗೆ ವಿಶ್ವನಾಥ್ ಶೆಟ್ಟಿ ಕಂಬಳ ಮುಂಡಾಸು ಕಟ್ಟಿದರು.

ಕಂಗಿನಮನೆ ವಿಜಯಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.