ಸುತ್ತೂರು ಶ್ರೀಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎ.ಎಂ.ಮಲ್ಲಿಕಾರ್ಜುನಸ್ವಾಮಿ (ಆಲೂರುಮಲ್ಲು) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸುತ್ತೂರು ಶ್ರೀಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎ.ಎಂ.ಮಲ್ಲಿಕಾರ್ಜುನಸ್ವಾಮಿ (ಆಲೂರುಮಲ್ಲು) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶತಮಾನಗಳ ಇತಿಹಾಸ ಹಿನ್ನೆಲೆಯುಳ್ಳ ಸುತ್ತೂರು ಮಹಾಸಂಸ್ಥಾನ ಕರ್ನಾಟಕ ರಾಜ್ಯದೆಲ್ಲೆಡೆ ಪ್ರಸಿದ್ಧಿ ಪಡೆದಿದ್ದು, ಮಹಾಸಂಸ್ಥಾನವು ಎಲ್ಲಾ ಜಾತಿ, ಎಲ್ಲಾ ಧರ್ಮಗಳ ಎಲ್ಲೆ ಮೀರಿ ಭಾರತದ್ಯಾಂತ ಹಾಗೂ ಬೇರೆ ಬೇರೆ ದೇಶಗಳಲ್ಲೂ ತುಂಬಾ ಹೆಸರು ವಾಸಿಯಾಗಿದೆ ಎಂದರು.
ಸುತ್ತೂರು ಮಹಾಸಂಸ್ಥಾನ ಭಾರತ ದೇಶದೆಲ್ಲೆಡೆ ಶೈಕ್ಷಣಿಕವಾಗಿ ತುಂಬಾ ಎತ್ತರಕ್ಕೆ ಬೆಳೆದಿದ್ದು, ಈ ಸಂಸ್ಥೆಯಲ್ಲಿ ಎಲ್ಲಾ ಜಾತಿ ಧರ್ಮಗಳ ಮಕ್ಕಳ ಶಿಕ್ಷಣ ಸರಿಸಮಾನವಾಗಿ ಶೈಕ್ಷಣಿಕ ವ್ಯವಸ್ಥೆ ಇದ್ದು, ಮಹಾಸಂಸ್ಥಾನದಲ್ಲಿ ವ್ಯಾಸಂಗ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು.ಆರೋಗ್ಯ ಕ್ಷೇತ್ರದಲ್ಲಿ ದೇಶ, ವಿದೇಶಗಳಲ್ಲೂ ಸಹ ಸಂಸ್ಥೆಯು ಉತ್ತಮವಾದ ಆರೋಗ್ಯ ಸೇವೆ ನೀಡುವ ಮುಖಾಂತರ, ಬಡವರ ಪಾಲಿಗೆ ದಾರಿ ದೀಪವಾಗಿದೆ. ಬಡವರಿಗೆ ಚಿಕಿತ್ಸೆಯನ್ನು ಸರ್ಕಾರದ ಹಲವಾರು ಯೋಜನೆಯಡಿ ಯಶಸ್ವಿನಿ ಯೋಜನೆ, ಪ್ರಧಾನಮಂತ್ರಿ ಆರೋಗ್ಯ ಯೋಜನೆ ಇನ್ನೂ ಹಲವಾರು ಯೋಜನೆಯಡಿ ಬಡವರಿಗೆ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಒದಗಿಸುವ ಮುಖಾಂತರ, ಬಡವರ ಪಾಲಿನ ಸಂಜೀವಿನಿಯಾಗಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.
ಜೆ.ಎಸ್.ಎಸ್. ಮಹಾಸಂಸ್ಥಾನವು ಇಷ್ಟೆಲ್ಲಾ ಉನ್ನತ ಮಟ್ಟದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದೆ. ಸುತ್ತೂರು ವೀರಮಹಾಸಂಸ್ಥಾನ ಪೀಠಾಧಿಪತಿ ದೇಶೀಕೇಂದ್ರ ಮಹಾಸ್ವಾಮಿಗಳ ದೂರ ದೃಷ್ಟಿ, ಸ್ವಾಮೀಜಿ ದೃಢಸಂಕಲ್ಪ, ಸೇವಾ ಮನೋಭಾವ, ಸಮಯಚಿತ್ತ ಸೌಮ್ಯ ಸ್ವಭಾವದ ಸ್ವಾಮೀಜಿಗಳ ಪರಿಕಲ್ಪನೆಯು ತುಂಬಾ ಉತ್ತಮ ಮೇರುಪರ್ವತದಂತೆ. ಇಂತಹ ಪೀಠಾಧ್ಯಕ್ಷರಿಗೆ ಭಾರತ ರತ್ನ ಪ್ರಶಸ್ತಿಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಮುಖಾಂತರ ಸಮಸ್ತ ಜನತೆ ಆಶಯವನ್ನು ಈಡೇರಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ ಮಾತನಾಡಿ, ಸುತ್ತೂರು ವೀರಮಹಾಸಂಸ್ಥಾನ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿದೇಶೀಕೇಂದ್ರ ಮಹಾಸ್ವಾಮಿಗಳು ಆರೋಗ್ಯ, ಶಿಕ್ಷಣ ಹಾಗೂ ಅನ್ನ ದಾಸೋಹ, ಸಾಮೂಹಿಕ ವಿವಾಹ ಮಾಡುವ ಮೂಲಕ ಅಮೂಲಾಗ್ರ ಸೇವೆಯನ್ನು ಗುರುತಿಸಿ ಅವರಿಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಶಿಫಾರಸ್ಸಿಗಾಗಿ ಜಿಲ್ಲಾಧಿಕಾರಿಗಳ ಮುಖಾಂತರ ಸಮಸ್ತ ಎಲ್ಲಾ ಜನತೆಯ ಪರವಾಗಿ ಮನವಿ ಸಲ್ಲಿಸಲಾಗುತ್ತದೆ ಎಂದರು.
ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಶಂಕರ್, ಜಿಲ್ಲಾ ಸಂಚಾಲಕ ದೊಡ್ಡರಾಯಪೇಟೆ ಮಹಾದೇವಸ್ವಾಮಿ ಕಲರ್, ತಾಲೂಕು ಅಧ್ಯಕ್ಷ ಕಾಳನಹುಂಡಿ ಮಲ್ಲಿಕ್, ತಾಲೂಕು ಸಂಚಾಲಕ ಹರದನಹಳ್ಳಿ ರಾಮಚಂದ್ರ, ಟೌನ್ ಸಂಚಾಲಕ ರಾಮಸಮುದ್ರ ಲಿಂಗರಾಜು, ಯಳಂದೂರು ತಾಲೂಕು ಅಧ್ಯಕ್ಷ ಕೆಸ್ತೂರು ಮರಪ್ಪ ಹಾಜರಿದ್ದರು.