ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು 2024ನೇ ಸಾಲಿನ ಗಣರಾಜ್ಯೋತ್ಸವ ಸಂದರ್ಭ ನೀಡುವ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪುರಸ್ಕಾರಕ್ಕೆಮಂಗಳೂರು ಪೊಲೀಸ್ ಕಮಿಷನರೇಟ್‌ನಲ್ಲಿ ಇಬ್ಬರು ಆಯ್ಕೆಯಾಗಿದ್ದಾರೆ. ಬಜಪೆ ಠಾಣಾ ಎಎಸ್‌ಐ ಶ್ರೀರಾಮ ಪೂಜಾರಿ ಹಾಗೂ ಸಂಚಾರ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹೆಡ್ ಕಾನ್‌ಸ್ಟೇಬಲ್(ಎಚ್‌ಸಿ) ಆಗಿರುವ ಮಣಿಕಂಠ ಮಂದಾರಬೈಲು ಆಯ್ಕೆಯಾಗಿದ್ದಾರೆ. ಎಎಸ್‌ಐ ಶ್ರೀರಾಮ ಪೂಜಾರಿ: ಶ್ರೀ ರಾಮ ಪೂಜಾರಿಯವರು ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಪದಕ ಪಡೆಯುತ್ತಿದ್ದಾರೆ. ಇವರು 1993ರ ನವೆಂಬರ್ 10ರಂದು ಪೊಲೀಸ್ ಇಲಾಖೆಗೆ ಸೇರಿದ್ದು, ಇವರು ಕಾರವಾರ ಪಿ.ಟಿ.ಎಸ್‌ನಲ್ಲಿ ಮೂಲ ತರಬೇತಿ ಪಡೆದಿದ್ದಾರೆ. ಮಂಗಳೂರಿನಿಂದ ಕಾರವಾರಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್‌ನಲ್ಲಿ ಹೋಗುವಾಗ ಹೊನ್ನಾವರದ ಬಾರ್ಜ್‌ನಿಂದ ಬಸ್ ನೀರಿನಲ್ಲಿ ಮುಳುಗಿದಾಗ ಅದರಲ್ಲಿ ಸುಮಾರು 25 ಜನರ ಪ್ರಾಣವನ್ನು ಆರು ಜನ ಪೊಲೀಸರ ತಂಡದೊಂದಿಗೆ ರಕ್ಷಣೆ ಮಾಡಿದ ಕೀರ್ತಿ ಇವರದ್ದಾಗಿದೆ. ಇವರು ಬ್ರಹ್ಮಾವರ, ಸುಳ್ಯ, ಎಸ್.ಪಿ. ವಿಶೇಷ ಪತ್ತೆ ದಳ, ಮೂಡುಬಿದಿರೆ, ಮೂಲ್ಕಿ, ಮಂಗಳೂರು ಸಿ.ಸಿ.ಬಿ. ಘಟಕದಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಬಜಪೆ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಅಪರಾಧ ಪತ್ತೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಇವರ 30 ವರ್ಷದ ಸೇವಾ ಅವಧಿಯಲ್ಲಿ 35 ಕೊಲೆ ಪ್ರಕರಣ, ಭೇದಿಸಿ ಪತ್ತೆ ಮಾಡಿರುತ್ತಾರೆ. ಅಲ್ಲದೇ ಕುಖ್ಯಾತ ಭೂಗತ ಪಾತಕಿಗಳು, ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದನೆ ಸಂಘಟನೆಯ ಭಯೋತ್ಪಾದಕರನ್ನು ಮಂಗಳೂರು, ಬೆಂಗಳೂರು, ಮುಂಬೈ ಮೂಲದ ಭೂಗತ ಪಾತಕಿಗಳ ಹಾಗೂ ಭೂಗತ ಜಗತ್ತಿನ ಅನೇಕ ಕ್ರಿಮಿನಲ್ ಗಳನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಷ್ಟ್ರ ವ್ಯಾಪ್ತಿಯಲ್ಲಿ ಪ್ರಚಾರವಾದಂತಹ ಮೂಡುಬಿದಿರೆ ಜೈನ ಬಸದಿಯ ಪ್ರಕರಣದ ಪ್ರಮುಖ ಆರೋಪಿಗಳನ್ನು ಪತ್ತೆ ಹಾಗೂ ಹಲವಾರು ಘೋರಅಪರಾಧ ಪ್ರಕರಣಗಳನ್ನು ಹಾಗೂ ಮಹಿಳೆಯರ ಕುತ್ತಿಗೆಯಿಂದ ಸರ ದರೋಡೆ, ಮತ್ತು ಮನೆ ಕಳ್ಳತನ, ಅತ್ಯಾಚಾರ ಪ್ರಕರಣ ಆರೋಪಿತರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಶ್ರೀ ರಾಮ ಪೂಜಾರಿಯವರು ಅತ್ಯುತ್ತಮ ಕೆಚ್ಚೆದೆಯ, ಸಮರ್ಪಕ, ಕ್ರಿಯಾತ್ಮಕ ಸಿಬ್ಬಂದಿಯಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಅತ್ಯುತ್ತಮ ವೃತ್ತಿಪರ ಜ್ಞಾನವನ್ನು ಹೊಂದಿರುತ್ತಾರೆ. ಸಾರ್ವಜನಿಕ ಮತ್ತು ವಿವಿಧ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿರುತ್ತಾರೆ. ಅಲ್ಲದೇ ಪೊಲೀಸ್ ಇಲಾಖೆಯಲ್ಲಿ ಮೇಲಾಧಿಕಾರಿವರೊಂದಿಗೆ ಉತ್ತಮ ಗೌರವದಿಂದ ನಡೆದುಕೊಂಡಿದ್ದು, ಇವರು 2014ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದುದಿದ್ದರು. ಅಲ್ಲದೆ ಇಲಾಖೆಯಲ್ಲಿ ಅನೇಕ ಪ್ರಶಂಸನ ಪತ್ರ ಮತ್ತು ನಗದು ಬಹುಮಾನ ಪಡೆದುಕೊಂಡಿದ್ದಾರೆ.ಎಚ್‌ಸಿ ಮಣಿಕಂಠ ಮಂದಾರಬೈಲು: 2000 ಏ.15ರಂದು ಪೊಲೀಸ್ ಇಲಾಖೆಗೆ ಸೇರಿದ ಇವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿ ನಂತರ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಉರ್ವ, ಮಂಗಳೂರು ಸಂಚಾರ ಪಶ್ಚಿಮ ಮತ್ತು ಬರ್ಕೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಪಾಂಡೇಶ್ವರ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಸಂಚಾರ ಉಪವಿಭಾಗದಲ್ಲಿ ಮುಖ್ಯ ಅರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಶೇಷವಾಗಿ ಸಾಮಾನ್ಯ ಕರ್ತವ್ಯ, ಸಹಾಯಕ ಠಾಣಾ ಬರಹಗಾರ, ತನಿಖಾ ಸಹಾಯಕ ಹಾಗೂ ಗುಪ್ತಮಾಹಿತಿ ಸಂಗ್ರಹ ಕರ್ತವ್ಯಗಳನ್ನು ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿಕೊಂಡು ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಹಿತಕರ ಘಟನೆಗಳ ಮುನ್ಸೂಚನೆಯನ್ನು ತತ್ಕಾಲದಲ್ಲಿ ಇಲಾಖಾ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಲ್ಲಿ ಹಾಗೂ ಇಲಾಖೆಯ ಗೌರವವನ್ನು ಉಳಿಸಿಕೊಳ್ಳುವಲ್ಲಿ ಶ್ರಮಿಸಿದ್ದಾರೆ. ಹಲವಾರು ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡವರನ್ನು ಪತ್ತೆ ಮಾಡುವಲ್ಲಿ ಸಹಕಾರ ನೀಡಿದ್ದಾರೆ. ಲೋಕ ಅದಾಲತ್‌ನಲ್ಲಿ ಒಂದು ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆ ನಡುವೆ ಉತ್ತಮ ಬಾಂಧವ್ಯ ಉಂಟು ಮಾಡುವಲ್ಲಿ ಕಾರಣರಾಗಿದ್ದಾರೆ. 2022ನೇ ಸಾಲಿನಲ್ಲಿ ಇವರಿಗೆ ಮುಖ್ಯಮಂತ್ರಿ ಪದಕ ಲಭಿಸಿತ್ತು. ಹಲವಾರು ಪ್ರಸಂಶನೀಯ ಪತ್ರ ಪಡೆದಿದ್ದಾರೆ.