ಸೆಪ್ಟೆಂಬರ್ 30 ರಂದು ಗಡಿನಾಡಿನಲ್ಲಿ ಕರ್ನಾಟಕ ಸಂಭ್ರಮ : ಗಡಿ ಚೇತನ ಪ್ರಶಸ್ತಿ ಪ್ರದಾನ

| Published : Sep 29 2024, 02:01 AM IST / Updated: Sep 29 2024, 12:02 PM IST

ಸೆಪ್ಟೆಂಬರ್ 30 ರಂದು ಗಡಿನಾಡಿನಲ್ಲಿ ಕರ್ನಾಟಕ ಸಂಭ್ರಮ : ಗಡಿ ಚೇತನ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಸೆಪ್ಟೆಂಬರ್ 30 ರಂದು ಜತ್ತ ತಾಲೂಕಿನ ಗುಡ್ಡಾಪುರದಲ್ಲಿ ಕರ್ನಾಟಕ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಡಾ.ಜಯದೇವಿ ತಾಯಿ ಲಿಗಾಡೆ, ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಮತ್ತು ಡಾ.ಚನ್ನಬಸವ ಪಟ್ಟದೇವರು ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು.  

 ವಿಜಯಪುರ :  ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯಪುರ ಜಿಲ್ಲಾಡಳಿತದ ಸಹಯೋಗದಲ್ಲಿ ಜತ್ತ ತಾಲೂಕಿನ ಗುಡ್ಡಾಪುರ ಶ್ರೀ ದಾನಮ್ಮದೇವಿ ಸುಕ್ಷೇತ್ರದಲ್ಲಿ ಸೆ.30ರಂದು ಕರ್ನಾಟಕ ಸಂಭ್ರಮ ಆಚರಿಸಲಾಗುವುದು. ಜೊತೆಯಲ್ಲಿ ಡಾ.ಜಯದೇವಿ ತಾಯಿ ಲಿಗಾಡೆ, ನಾಡೋಜ ಡಾ.ಕಯ್ಯಾರ ಕಿಂಞ್ಞಣ್ಣ ರೈ ಮತ್ತು ಡಾ.ಚನ್ನಬಸವ ಪಟ್ಟದೇವರು ಹೆಸರಿನಲ್ಲಿ ಗಡಿ ಪ್ರಾಧಿಕಾರದಿಂದ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಹೊರನಾಡ ಗಡಿ ಕನ್ನಡಿಗರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಸಮಿತಿ 2023-24ನೇ ಸಾಲಿಗೆ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಗಡಿನಾಡಿನ ಚೇತನ ಪ್ರಶಸ್ತಿಗೆ ಕಾಸರಗೋಡಿನ ರಾಧಾಕೃಷ್ಣ ಉಳಿಯತ್ತಡ, ಡಾ.ಜಯದೇವಿ ತಾಯಿ ಲಿಗಾಡೆ ಗಡಿನಾಡ ಚೇತನ ಪ್ರಶಸ್ತಿಗೆ ಬೀದರದ ಪಂಚಾಕ್ಷರಿ ಪುಣ್ಯಶೆಟ್ಟಿ, ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಗಡಿನಾಡ ಚೇತನ ಪ್ರಶಸ್ತಿಗೆ ಬೆಳಗಾವಿಯ ಬಿ.ಎಸ್.ಗವಿಮಠ ಹಾಗೂ 2024-25ನೇ ಸಾಲಿನ ಡಾ.ಚನ್ನಬಸವ ಪಟ್ಟದ್ದೇವರು, ಗಡಿನಾಡ ಚೇತನ ಪ್ರಶಸ್ತಿಗೆ ಅಹ್ಮದಾಬಾದ್‌ನ ಕರ್ನಾಟಕ ಸಂಘ, ಜಯದೇವಿ ತಾಯಿ ಲಿಗಾಡೆ ಗಡಿನಾಡಿನ ಚೇತನ ಪ್ರಶಸ್ತಿಗೆ ಮಹಾರಾಷ್ಟ್ರ ಸಂಖದ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಉಮದಿಯ ಸರ್ವೋದಯ ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಗಡಿನಾಡ ಚೇತನ ಪ್ರಶಸ್ತಿಗೆ ಕೇರಳದ ಕಾಸರಗೋಡಿನ ಪೆರಡಾಲ ನೀರ್ಚಾಲು, ಕುಂಬಳೆ (ದಾರಿ) ಮಹಾಜನ ವಿದ್ಯಾವರ್ಧಕ ಸಂಘ ಆಯ್ಕೆ ಮಾಡಲಾಗಿದೆ. ಸಿಎಂ ಸಿದ್ಧರಾಮಯ್ಯ ಗಡಿನಾಡ ಚೇತನ ಪ್ರಶಸ್ತಿ ಹಾಗೂ ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ಕನ್ನಡ ಭಾಷೆಯ ನಲಿ-ಕಲಿ ಕಲಿಕಾ ಸಾಮಗ್ರಿಗಳು ವಿತರಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಾರಂಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಲಾಂಛನವನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಬಿಡುಗಡೆ ಮಾಡಲಿದ್ದಾರೆ. ರಾಜ್ಯ ಬೃಹತ್ ಕೈಗಾರಿಕೆ ಸಚಿವ ಡಾ.ಎಂ.ಬಿ.ಪಾಟೀಲ ಗಡಿ ಪ್ರಾಧಿಕಾರದ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತರ ಪರಿಚಯಾತ್ಮಕ ಕೈಪಿಡಿಯನ್ನು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.ಸಮಾರಂಭದಲ್ಲಿ ಮಹಾರಾಷ್ಟ್ರಕಾರ್ಮಿಕ ಸಚಿವ ಸಾಂಗ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ ಖಾಡೆ ಸೇರಿದಂತೆ ಸಾಂಗ್ಲಿ-ಸೋಲಾಪುರ ಜಿಲ್ಲೆಯ ಲೋಕಸಭಾ ಸದಸ್ಯರು, ಚಿಕ್ಕೋಡಿ ಹಾಗೂ ವಿಜಯಪುರದ ಸಂಸದರು, ಮಹಾರಾಷ್ಟ್ರದ ಶಾಸಕರು, ಕರ್ನಾಟಕ ಸರ್ಕಾರದ ವಿವಿಧ ಸಚಿವರು ಹಾಗೂ ಶಾಸಕರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಅಂದು ಸಂಜೆ 7ಕ್ಕೆ ಗಂಗಾವತಿ ಪ್ರಾಣೇಶ ಮತ್ತು ತಂಡದಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಡಿಸಿ ಸೋಮಲಿಂಗ ಗೆಣ್ಣೂರ, ಗಡಿ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಸದಸ್ಯ ಎಂ.ಎಸ್.ಮದಭಾವಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ್ ವಾಲಿಕಾರ ಉಪಸ್ಥಿತರಿದ್ದರು.