ಮಾರನಹಳ್ಳಿ ಪ್ರೌಢಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪಶ್ಚಿಮ ಘಟ್ಟಗಳ ಅತಿ ವಿಸ್ತಾರ ಪ್ರದೇಶಗಳನ್ನು ಒಳಗೊಂಡಿರುವ ಸಕಲೇಶಪುರ ಪ್ರಾದೇಶಿಕ ಅರಣ್ಯ ವಲಯದಲ್ಲಿ ಬೇಸಿಗೆಯ ಅವಧಿಯಲ್ಲಿ ಅರಣ್ಯ ಬೆಂಕಿ ಪ್ರಕರಣಗಳ ಸಂಭವನೀಯತೆ ಹೆಚ್ಚಿರುವುದರಿಂದ ಸಾರ್ವಜನಿಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದರು. ಯಾವುದೇ ಕಾರಣಕ್ಕೂ ಅರಣ್ಯ ಹಾಗೂ ಹಿಡುವಳಿ ಜಾಗಗಳಲ್ಲಿ ಬೆಂಕಿ ಹಾಕಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಬೇಸಿಗೆ ಕಾಲದಲ್ಲಿ ಅರಣ್ಯ ಹಾಗೂ ವನ್ಯಜೀವಿಗಳಿಗೆ ಸಂಭವಿಸಬಹುದಾದ ಹಾನಿ, ಅರಣ್ಯ ಬೆಂಕಿ ತಡೆಗಟ್ಟುವ ಕ್ರಮಗಳು ಹಾಗೂ ಬೆಂಕಿ ಕಾಣಿಸಿಕೊಂಡಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಹಯೋಗದಲ್ಲಿ ಅರಿವು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ತಾಲೂಕಿನ ಮಾರನಹಳ್ಳಿ ಪ್ರೌಢಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪಶ್ಚಿಮ ಘಟ್ಟಗಳ ಅತಿ ವಿಸ್ತಾರ ಪ್ರದೇಶಗಳನ್ನು ಒಳಗೊಂಡಿರುವ ಸಕಲೇಶಪುರ ಪ್ರಾದೇಶಿಕ ಅರಣ್ಯ ವಲಯದಲ್ಲಿ ಬೇಸಿಗೆಯ ಅವಧಿಯಲ್ಲಿ ಅರಣ್ಯ ಬೆಂಕಿ ಪ್ರಕರಣಗಳ ಸಂಭವನೀಯತೆ ಹೆಚ್ಚಿರುವುದರಿಂದ ಸಾರ್ವಜನಿಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದರು. ಯಾವುದೇ ಕಾರಣಕ್ಕೂ ಅರಣ್ಯ ಹಾಗೂ ಹಿಡುವಳಿ ಜಾಗಗಳಲ್ಲಿ ಬೆಂಕಿ ಹಾಕಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ವಲಯ ಅರಣ್ಯಾಧಿಕಾರಿಗಳ ಕಚೇರಿ, ಸಕಲೇಶಪುರ ವಲಯದಿಂದ ಹೊರಡಿಸಿರುವ ಪ್ರಕಟಣೆಯ ಪ್ರಕಾರ ಜನವರಿಯಿಂದ ಮೇ ತಿಂಗಳವರೆಗೆ ತಾಪಮಾನ ಹೆಚ್ಚಾಗುವ ಕಾರಣ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಹರಡುವ ಅಪಾಯ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಂಪತ್ತಿನ ರಕ್ಷಣೆಗೆ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದ್ದು, ಎಲ್ಲರೂ ಜವಾಬ್ದಾರಿಯಿಂದ ವರ್ತಿಸಬೇಕೆಂದು ತಿಳಿಸಲಾಯಿತು.

ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಲ್ಲಿ ತಕ್ಷಣ ಅರಣ್ಯ ಇಲಾಖೆಯ ಸಹಾಯವಾಣಿ ಸಂಖ್ಯೆ 1926, ಜಿಲ್ಲಾ ಆನೆ ಕಾರ್ಯಪಡೆ, ಹಾಸನ ಸಹಾಯವಾಣಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಅರಣ್ಯ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಸಹಕರಿಸಬೇಕೆಂದು ಅಧಿಕಾರಿಗಳು ಕೋರಿದರು.