ನಾಡಿನ ಇತಿಹಾಸ, ಸಂಸ್ಕೃತಿ ಬಗ್ಗೆ ಜಾಗೃತಿ ನಮ್ಮ ಕರ್ತವ್ಯ

| Published : Nov 02 2024, 01:42 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ನವೆಂಬರ್ ಮಾತ್ರವಲ್ಲದೇ ಇಡೀ ತಿಂಗಳು ರಾಜ್ಯ ಹಾಗೂ ವಿದೇಶಗಳಲ್ಲು ಸಹ ಕನ್ನಡಿಗರು ರಾಜ್ಯೋತ್ಸವ ಆಚರಿಸುತ್ತಾರೆ. ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ನವೆಂಬರ್ ಮಾತ್ರವಲ್ಲದೇ ಇಡೀ ತಿಂಗಳು ರಾಜ್ಯ ಹಾಗೂ ವಿದೇಶಗಳಲ್ಲು ಸಹ ಕನ್ನಡಿಗರು ರಾಜ್ಯೋತ್ಸವ ಆಚರಿಸುತ್ತಾರೆ. ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.ಪಟ್ಟಣದ ಮಿನಿವಿಧಾನ ಸೌಧದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಏಕೀಕೃತ ರಾಜ್ಯವಾದದ್ದು ನ.1ರ 1973 ರಂದು, ಕರ್ನಾಟಕ ರಾಜ್ಯವೆಂದು ಮರುನಾಮಕರಣಗೊಂಡು 51 ವರ್ಷ ಪೂರ್ಣಗೊಂಡಿರುವ ಸುದಿನ ಇದು. ಕನ್ನಡದ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಲು ನಾವು ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದರು.ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಬೆಯ ನಾಡು, ತಾಯಿ ಭುವನೇಶ್ವರಿಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯುತ್ತೇವೆ. ಇಲ್ಲಿ ನದಿಗಳು ಹರಿಯುವ ನದಿಗಳು, ಸಾಧು-ಸಂತರು-ದಾಸರು- ಶಿವಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ. ಕನ್ನಡಕ್ಕೆ ಎಂಟು ಜ್ಞಾನ ಪೀಠ ಪ್ರಶಸ್ತಿ ಲಭಿಸಿದ್ದು, ಈ ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ. ಇಂದು ನಾವು ಜಾತಿ ಮತ ಧರ್ಮಗಳ ಜನರು ಸೇರಿ ರಾಜ್ಯೋತ್ಸವವನ್ನು ಆಚರಿಸುತ್ತೇವೆ. ಇದು ನಮ್ಮ ಸಂಭ್ರಮಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.ಕರ್ನಾಟಕ ರಾಜ್ಯದ ಏಕೀಕರಣಕ್ಕೆ ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕೆ.ಶಿವರಾಮ ಕಾರಂತ, ಎ.ಎನ್.ಕೃಷ್ಣರಾವ ಮತ್ತು ಬಿ.ಎಂ.ಶ್ರೀಕಂಠಯ್ಯ ಪ್ರಮುಖರ ಸ್ಥಾನದಲ್ಲಿದ್ದಾರೆ. ಕನ್ನಡಾಂಬೆಯ ಮಕ್ಕಳಾದ ನಾವು ಈ ಮಾಹಿತಿಯನ್ನು ಸದಾ ತಿಳಿದಿರಬೇಕು. ಅಷ್ಟೇ ಅಲ್ಲ ಕರ್ನಾಟಕಕ್ಕೆ ಆಗಮಿಸುವ ಅನ್ಯಭಾಷಿಗರಿಗೆ ಕನ್ನಡವನ್ನು ಕಲಿಸಿ, ನಾವು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಬೇಕಿದೆ ಎಂದರು.ಈ ವೇಳೆತಾಯಿ ಭುವನೇಶ್ವರಿ ದೇವಿಯ ಮೆರವಣಿಗೆ ನಡೆದ್ದ್ದು, ಸ್ಥಬ್ಧ ಚಿತ್ರ ಪ್ರದರ್ಶಿಸಿದ ಸರ್ಕಾರಿ ಉರ್ದು ಶಾಲೆಯ ಮಕ್ಕಳ ಪ್ರಾಥಮಿಕ ಶಾಲೆ ಪ್ರಥಮ, ವಿಬಿಸಿ ಪ್ರೌಢ ಶಾಲೆಗೆ ದ್ವಿತೀಯ, ಬಸವ ಇಂಟರನ್ಯಾಷನಲ್‌ ಶಾಲೆ ತೃತೀಯ ಶಾಲೆಗಳಿಗೆ ಪ್ರಥಮ, ದ್ವೀತಿಯ, ತೃತಿಯ ಬಹುಮಾನ ನೀಡಲಾಯಿತು. ಎಸ್ ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಕನ್ನಡ ಭಾಷೆಯಲ್ಲಿ ಸಾಧನೆ ಮಾಡಿದ ಐ.ಬಿ.ಹಿರೇಮಠ, ಪ್ರಕಾಶ ನರಗುಂದ, ಶಿವಪುತ್ರಪ್ಪ ಅಜಮನಿ, ಎಚ್.ಆರ್.ಬಾಗವಾನ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ತಹಸೀಲ್ದಾರ್‌ ಬಲರಾಮ ಕಟ್ಟಿಮನಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಕನ್ನಡ ಪರ ಹೋರಾಟಗಾರರಾದ ಹುಸೇನ ಮುಲ್ಲಾ, ಸಂಗಯ್ಯ ಸಾರಂಗಮಠ, ರಾಜುಗೌಡ ತುಂಬಗಿ, ಪ್ರಶಾಂತ ಕಾಳೆ, ರುದ್ರೇಶ ಮುರಾಳ ಸೇರಿದಂತೆ ಹಲವರು ಇದ್ದರು.