ಸಾರಾಂಶ
ಮಕ್ಕಳನ್ನು ಹಲವಾರು ಕಾರಣಗಳಿಂದ ಹಾಗೂ ಸಮಸ್ಯೆಗಳಿಂದ ಬಾಲ ಕಾರ್ಮಿಕರಾಗಿ ದುಡಿಯುತ್ತಿರುವುದು ಕಂಡು ಬಂದರೆ ಪೋಷಕರು ಹಾಗೂ ಮಾಲೀಕರಿಗೆ ತಿಳಿಹೇಳಿ, ಬಾಲಕಾರ್ಮಿಕ ಪದ್ಧತಿಯಿಂದ ಬಿಡುಗಡೆಗೊಳಿಸಿ
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಬಾಲ ಕಾರ್ಮಿಕ ಪದ್ಧತಿಯಿಂದಾಗುವ ಅನಾಹುತಗಳು, ದುಷ್ಪರಿಣಾಮಗಳ ಬಗ್ಗೆ ಎಲ್ಲರೂ ಜಾಗೃತರಾಗಿ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಮುಂದಾಗಬೇಕೆಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಆರ್.ಜಿ. ಸೋಮಶೇಖರ್ ತಿಳಿಸಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಕ್ಕಳನ್ನು ದುಡಿಸುವುದು ಅಪರಾಧಕಾಲೇಜಿನ ಉಪನ್ಯಾಸಕ ಆರ್.ಜಿ. ಸೋಮಶೇಖರ್ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು, ಜೊತೆಗೆ ಅದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜೂನ್ 12 ರ ಈ ದಿನವನ್ನು ಆಚರಿಸಲಾಗುತ್ತದೆ. ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸುವ ವಯಸ್ಸಿನಲ್ಲಿ ದುಡಿಮೆಗೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.
ಬಾಲ್ಯದಲ್ಲಿರುವ ಮಕ್ಕಳು ಜಗತ್ತು ಏನೆಂಬುದನ್ನು ಅರ್ಥ ಮಾಡಿಕೊಳ್ಳಲಾಗದ ಆ ದಿನಗಳು ಎಲ್ಲರಿಗೂ ಸುಂದರವೇ. ಆದರೆ ಮಕ್ಕಳನ್ನು ಹಲವಾರು ಕಾರಣಗಳಿಂದ ಹಾಗೂ ಸಮಸ್ಯೆಗಳಿಂದ ಬಾಲ ಕಾರ್ಮಿಕರಾಗಿ ದುಡಿಯುತ್ತಿರುವುದು ಕಂಡು ಬಂದರೆ ಪೋಷಕರು ಹಾಗೂ ಮಾಲೀಕರಿಗೆ ತಿಳಿಹೇಳಿ, ಬಾಲಕಾರ್ಮಿಕ ಪದ್ಧತಿಯಿಂದ ಬಿಡುಗಡೆಗೊಳಿಸಿ ಶಿಕ್ಷಣ ಕೊಡಿಸಬೇಕು ಎಂದರು.ಮಾಲೀಕರಿಗೆ ತಿಳಿವಳಿಕೆ ಹೇಳಿ
ಭೌತಶಾಸ್ತ್ರ ಉಪನ್ಯಾಸಕ ಮೆಹಬೂಬ್ ಖಾನ್ ಮಾತನಾಡಿ, ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳು ಈ ಕೆಟ್ಟ ವ್ಯವಸ್ಥೆಯಿಂದ ಹೊರಬಂದು ತಮ್ಮ ಹಕ್ಕುಗಳ ಕುರಿತು ಜಾಗೃತಿ ಹೊಂದಿ ದೇಶದ ಉತ್ತಮ ನಾಗರಿಕರಾಗಬೇಕು ಎಂಬುದು ಈ ದಿನದ ಉದ್ದೇಶವಾಗಿದೆ. ಅರ್ಹತೆಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನು ಬಾಹಿರ. ಆದರೂ ಕಾನೂನಿನ ಕಣ್ಣು ತಪ್ಪಿಸಿ ಚಿಕ್ಕ ಮಕ್ಕಳನ್ನು ದುಡಿಸಿಕೊಳ್ಳುತ್ತಿದ್ದರೆ ಅಂತಹವರಿಗೆ ತಿಳಿವಳಿಕೆ ಮೂಡಿಸಿ ಬಾಲಕಾರ್ಮಿಕ ಪದ್ಧತಿಯಿಂದ ಬಿಡುಗಡೆಗೊಳಿಸಿ ವಿದ್ಯಾಭ್ಯಾಸ ಕೊಡಿಸಬೇಕೆಂದು ಮನವಿ ಮಾಡಿದರು.ಕಾಲೇಜಿನ ಉಪನ್ಯಾಸಕರಾದ ಮಂಜು ಭಾರ್ಗವಿ, ಬಿ.ಜೆ ರಾಮಣ್ಣ, ವರದರಾಜನ್, ನರೇಶ್, ಅನಂತ್ ಕುಮಾರ್ ಸೇರಿ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದು ಪ್ರತಿಜ್ಞಾವಿಧಿ ಸ್ವೀಕರಿಸಿದರು.