ಕಟೀಲು ಜಾತ್ರೆ ರಥೋತ್ಸವ ವೇಳೆ ಪ್ಲಾಸ್ಟಿಕ್‌ ಬಳಕೆ ವಿರುದ್ಧ ಜಾಗೃತಿ

| Published : Apr 19 2024, 01:03 AM IST

ಕಟೀಲು ಜಾತ್ರೆ ರಥೋತ್ಸವ ವೇಳೆ ಪ್ಲಾಸ್ಟಿಕ್‌ ಬಳಕೆ ವಿರುದ್ಧ ಜಾಗೃತಿ
Share this Article
  • FB
  • TW
  • Linkdin
  • Email

ಸಾರಾಂಶ

ಮೂಲತಃ ಮುಂಡ್ಕೂರಿನವರಾದ ಚಂದ್ರಶೇಖರ ಶೆಟ್ಟಿ ಬೆಂಗಳೂರಿನಲ್ಲಿ ಸಿಎ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಂಸ್ಥೆ ನಡೆಸುತ್ತಿದ್ದಾರೆ. ಕಟೀಲು ಕೋಟ ರಾಮಕುಂಜ ಶಾಲೆಗಳಲ್ಲಿ ಸೈನ್ಸ್‌ ಪಾರ್ಕ್‌ಗಳನ್ನು ನಿರ್ಮಿಸಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದಲ್ಲಿ ಏ.19ರಂದು ನಡೆಯಲಿರುವ ಹಗಲು ರಥೋತ್ಸವದ ಸಂದರ್ಭ ಬೆಂಗಳೂರಿನ ಕ್ಯಾಪ್ಸ್ ಫೌಂಡೇಷನ್ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜಗಜಾಗೃತಿ ಮಾಡಲಿದೆ. ಈ ನಿಟ್ಟಿನಲ್ಲಿ ದೇವಸ್ಥಾನಕ್ಕೆ ಬರುವ 10 ಸಾವಿರ ಭಕ್ತರಿಗೆ ಬಟ್ಟೆ ಚೀಲಗಳನ್ನು ವಿತರಿಸಲಿದೆ ಎಂದು ಕ್ಯಾಪ್ಸ್ ಫೌಂಡೇಷನ್ ಅಧ್ಯಕ್ಷ ಸಿಎ ಚಂದ್ರಶೇಖರ ಶೆಟ್ಟಿ ಹೇಳಿದರು. ಬುಧವಾರ ಕಟೀಲು ದೇವಳದಲ್ಲಿ ದೇವಳದ ಆಡಳಿತ ಮಂಡಳಿ ಹಾಗೂ ಸಿಬಂದಿ ಸಮ್ಮುಖ ಚೀಲ ಹಾಗೂ ಟೀಶರ್ಟ್ ಅನಾವರಣಗೊಳಿಸಿ ಮಾತನಾಡಿದರು. ಕಟೀಲು ದೇವಳದ 700 ಮಂದಿ ಸಿಬ್ಬಂದಿ ಹಾಗೂ ಸ್ವಯಂಸೇವಕರಿಗೆ ಟೀ ಶರ್ಟ್ ನೀಡಲಾಗುವುದು ಎಂದು ತಿಳಿಸಿದರು. ಈಗಾಗಲೇ ಮುಂಡ್ಕೂರು ಕಜೆ, ಕೊಡೆತ್ತೂರು ತಾಳಿಪಾಡಿ ಮುಂತಾದ ಬ್ರಹ್ಮಕಲಶೋತ್ಸವ ಸಂದರ್ಭ ಬಟ್ಟೆ ಚೀಲಗಳನ್ನು ವಿತರಿಸಲಾಗಿದೆ. ಶಿಬರೂರು ಬ್ರಹ್ಮಕಲಶೋತ್ಸವದಲ್ಲಿ 50 ಸಾವಿರ ಬಟ್ಟೆ ಚೀಲ ನೀಡಲಾಗುತ್ತಿದೆ. ಮೂಲ್ಕಿ ತಾಲೂಕು, ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನ ಅಲ್ಲದೆ ಒಂದು ಸಾವಿರಕ್ಕೂ ಮಿಕ್ಕಿದ ಶಾಲೆಗಳ ಸಾವಿರಾರು ಮಕ್ಕಳಿಗೆ ಬಟ್ಟೆ ಚೀಲ ನೀಡಲಾಗಿದ್ದು ಪ್ಲಾಸ್ಟಿಕ್ ಬಳಸಬೇಡಿ. ಅಂಗಡಿ ಮುಂತಾದ ಕಡೆಗಳಿಗೆ ಹೋದಾಗ ಬಟ್ಟೆ ಚೀಲಗಳನ್ನೇ ಬಳಸಿ ಎನ್ನುವ ಜಾಗೃತಿಗಾಗಿ ಬಟ್ಟೆ ಚೀಲಗಳನ್ನು ನೀಡಲಾಗುತ್ತಿದೆ. ಅಲ್ಲದೆ ನೀರು ಪಾನೀಯ ಕುಡಿಯಲು ಪ್ಲಾಸ್ಟಿಕ್ ಲೋಟ ಬಳಸಬೇಡಿ ಎಂದು ಜಾಗೃತಿ ಮೂಡಸಲಾಗುತ್ತಿದೆ. ಸಹಸ್ರಾರು ಮಕ್ಕಳಿಗೆ ಸ್ಟೀಲಿನ ಬಾಟಲಿ ವಿತರಿಸಲಾಗಿದೆ. ಜಾತ್ರೆಗಳಲ್ಲಿ ಸ್ಟೀಲಿನ ಬಾಟಲಿಯಲ್ಲಿ ನೀರು ವಿತರಿಸಿ ಪ್ಲಾಸ್ಟಿಕ್ ಬಳಸದಂತೆ ಮನವರಿಕೆ ಮಾಡಲಾಗುತ್ತಿದೆ ಎಂದು ಹೇಳಿದರು. ಮೂಲತಃ ಮುಂಡ್ಕೂರಿನವರಾದ ಚಂದ್ರಶೇಖರ ಶೆಟ್ಟಿ ಬೆಂಗಳೂರಿನಲ್ಲಿ ಸಿಎ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಂಸ್ಥೆ ನಡೆಸುತ್ತಿದ್ದಾರೆ. ಕಟೀಲು ಕೋಟ ರಾಮಕುಂಜ ಶಾಲೆಗಳಲ್ಲಿ ಸೈನ್ಸ್‌ ಪಾರ್ಕ್‌ಗಳನ್ನು ನಿರ್ಮಿಸಿದೆ.

ಕಟೀಲು ಜಾತ್ರೆ: ರಸ್ತೆ ಸಂಚಾರದಲ್ಲಿ ಬದಲಾವಣೆ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಏ.19, 20ರಂದು ಕಟೀಲು ಪರಿಸರದಲ್ಲಿ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಡು ಮಾಡಲಾಗಿದೆ.ಕಟಿಲು ಮುಖ್ಯ ರಸ್ತೆ (ರಥಬೀದಿ)ಯಲ್ಲಿ ಮಲ್ಲಿಗೆ ಅಂಗಡಿ ಕ್ರಾಸ್‍ನಿಂದ ದುರ್ಗಾ ಸಂಜೀವಿನಿ ಆಸ್ಪತ್ರೆ ಜಂಕ್ಷನ್ (ಕಲ್ಲಕುಮೇರು ಕ್ರಾಸ್)ವರೆಗೆ ವಾಹನ ಸಂಚಾರ ನಿಲುಗಡೆ ನಿಷೇಧಿಸಿದೆ. ಮಂಗಳೂರಿನಿಂದ ಕಟೀಲಿಗೆ ಬರುವ ವಾಹನಗಳು ಮಲ್ಲಿಗೆ ಅಂಗಡಿ ಕ್ರಾಸ್ ಬಳಿ ಎಡಕ್ಕೆ ಚಲಿಸಿ, ಗಿಡಿಗೆರೆ ರಸ್ತೆ ಮೂಲಕ ಕಟೀಲು ಪಾರ್ಕಿಂಗ್ ಸ್ಥಳಗಳಿಗೆ ಚಲಿಸುವುದು. ಕಟೀಲಿನಿಂದ ಮಂಗಳೂರಿಗೆ ಬರುವ ವಾಹನಗಳು ಕಟೀಲು ಪದವಿ ಪೂರ್ವ ಕಾಲೇಜು ಮೈದಾನದ ಪಕ್ಕದ ರಸ್ತೆಯ ಮೂಲಕ ಬ್ಯಾಂಕ್ ಆಫ್ ಬರೋಡಾ ಎದುರುಗಡೆ ರಸ್ತೆಯಲ್ಲಿ ಚಲಿಸಿ ಬಜಪೆ- ಮಂಗಳೂರು ಕಡೆಗೆ ಸಂಚರಿಸುವುದು. ಸರ್ವಿಸ್ ಬಸ್ಸು, ಟೂರಿಸ್ಟ್ ಬಸ್ಸು, ಕಾರು ಹಾಗೂ ಇತರೆ ವಾಹನಗಳಿಗೆ ಬಸ್ ಸ್ಟ್ಯಾಂಡ್ ಹಿಂದುಗಡೆ ಇರುವ ಸಿತ್ಲಾ ಮೈದಾನ ಹಾಗೂ ಕಟೀಲು ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ಹಾಗೂ ಅಪರ ದಂಡಾಧಿಕಾರಿಯೂ ಆಗಿರುವ ಅನುಪಮ್ ಅಗರ್ವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.