ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟಿನ ವತಿಯಿಂದ ಆರಂಭಿಸಲಾದ ಸ್ವದೇಶಿ ಬಳಸಿ ದೇಶ ಬೆಳೆಸಿ ಎಂಬ ಘೋಷಣೆ ಬಳಸಿ ಹಮ್ಮಿಕೊಳ್ಳಲಾದ ಸ್ವದೇಶಿ ಜಾಗೃತಿ ಸೈಕಲ್ ಜಾಥಾಕ್ಕೆ ಭಟ್ಕಳದ ಮುಖ್ಯವೃತ್ತದಲ್ಲಿ ಬಿಜೆಪಿ ಹಾಗೂ ಭಾರತೀಯ ಕಿಸಾನ್ ಸಂಘದ ವತಿಯಿಂದ ಅದ್ಧೂರಿ ಸ್ವಾಗತ ನೀಡಲಾಯಿತು.

ಭಟ್ಕಳ: ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟಿನ ವತಿಯಿಂದ ಆರಂಭಿಸಲಾದ ಸ್ವದೇಶಿ ಬಳಸಿ ದೇಶ ಬೆಳೆಸಿ ಎಂಬ ಘೋಷಣೆ ಬಳಸಿ ಹಮ್ಮಿಕೊಳ್ಳಲಾದ ಸ್ವದೇಶಿ ಜಾಗೃತಿ ಸೈಕಲ್ ಜಾಥಾಕ್ಕೆ ಪಟ್ಟಣದ ಮುಖ್ಯವೃತ್ತದಲ್ಲಿ ಬಿಜೆಪಿ ಹಾಗೂ ಭಾರತೀಯ ಕಿಸಾನ್ ಸಂಘದ ವತಿಯಿಂದ ಅದ್ಧೂರಿ ಸ್ವಾಗತ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಗೋವಿಂದ ನಾಯ್ಕ, ಸ್ವದೇಶಿ ಜಾಗೃತಿ ಸೈಕಲ್ ಜಾಥಾ ರಾಜ್ಯದ 33 ಜಿಲ್ಲೆಗಳಲ್ಲಿ ಸ್ವದೇಶಿ ವಸ್ತುಗಳನ್ನು ಬಳಸಿ ಸ್ಥಳೀಯ ರೈತರು, ಕೈಗಾರಿಕೆಗಳಿಗೆ ಉತ್ತೇಜನ ನೀಡುವಂತೆ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೈಕಲ್ ಜಾಥಾದ ಮೂಲಕ ರಾಜ್ಯದ 3500 ಕಿಮೀ ಸುತ್ತಿ ಜಾಗೃತಿ ಮೂಡಿಸುತ್ತಿದ್ದಾರೆ. ನಾವೆಲ್ಲರೂ ಸ್ವದೇಶಿ ವಸ್ತುಗಳನ್ನು ಬೆಳೆಸಬೇಕು. ಮೊದಲು ನಮ್ಮ ಮನೆಯನ್ನು ಸ್ವದೇಶಿಗೊಳಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕು ಎಂದರು.

ಭಾರತೀಯ ಕಿಸಾನ್ ಸಂಘದ ಪ್ರಮುಖ ಮಾಧವ ಹೆಗಡೆ ಮಾತನಾಡಿ, ರೈತರು, ಕಾರ್ಮಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿಯೊಬ್ಬರೂ ಸ್ವದೇಶಿ ವಸ್ತುಗಳನ್ನು ಬಳಸಿ ದೇಶ ಅಭಿವೃದ್ಧಿಗೊಳಿಸಲು ಮುಂದಾಗಬೇಕು. ಆ ಮೂಲಕ ಆತ್ಮನಿರ್ಭರ ಭಾರತಕ್ಕೆ ನಾವೆಲ್ಲರೂ ಸಹಕಾರ ಕೊಡಬೇಕು ಎಂದರು.

ಜಾಥಾದ ನೇತೃತ್ವದ ವಹಿಸಿದ್ದ ಪ್ರಮುಖರು ಮಾತನಾಡಿ, ನಮ್ಮ ತಂಡದಲ್ಲಿ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ನಿವೃತ್ತ ಸೈನಿಕರು ಎಲ್ಲರೂ ಇದ್ದು, ನಾವೆಲ್ಲರೂ ಕಳೆದ 32 ದಿನಗಳಿಂದ ರಾಜ್ಯದಲ್ಲಿ ಸ್ವದೇಶಿ ವಸ್ತು ಬಳಕೆ ಬಗ್ಗೆ ಸೈಕಲ್ ಯಾತ್ರೆ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ದೊರಕಿದೆ ಎಂದರು.

ಸೈಕಲ್ ಜಾಥಾ ಸ್ವಾಗತಿಸುವ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ನಾರಾಯಣ ಹೆಗಡೆ , ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ಕಿಸಾನ್ ಮೋರ್ಚಾದ ವಿಷ್ಣುಮೂರ್ತಿ ಹೆಗಡೆ, ಬಿಜೆಪಿ ಪ್ರಮುಖರಾದ ದಿನೇಶ ನಾಯ್ಕ, ಶ್ರೀಕಾಂತ ನಾಯ್ಕ, ಪಾಂಡುರಂಗ ನಾಯ್ಕ, ರಾಘವೇಂದ್ರ ನಾಯ್ಕ ಮುಟ್ಟಳ್ಳಿ, ಜಾಥಾ ತಂಡದ ರಮೇಶ, ವೀಣಾ ರಾಮನಾರಾಯಣ್, ಚಿನ್ನಸ್ವಾಮಿ, ಬಾಬುಕುಮಲಾಕರ್, ಜಹೀರ್ ಕರೀಂ, ಕೆ.ಜೆ. ಪಿಳ್ಳೈ, ಗೋಪಾಲಕೃಷ್ಣ ಪಿಳ್ಳೈ ಮುಂತಾದವರಿದ್ದರು.