ಸಾರಾಂಶ
ಸ್ನೇಹ- ಸಂಬಂಧಗಳ ಹೆಸರಿನಲ್ಲಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು. ಓದುವ ವಯಸ್ಸಿನಲ್ಲಿ ಓದುವ ಕಡೆ ನಿಮ್ಮ ಗಮನವಿರಬೇಕು. ಈ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಗೆ ಹೆಚ್ಚು ಬೇಡಿಕೆ ಇದೆ. ಹಾಗಾಗಿ ತಾವೆಲ್ಲರೂ ಆಂಗ್ಲ ಭಾಷೆಯ ನೈಪುಣ್ಯತೆಯನ್ನು ಹೊಂದಬೇಕು .
ಕನ್ನಡಪ್ರಭ ವಾರ್ತೆ ಹಲಗೂರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರೆಡ್ ರಿಬ್ಬನ್ ಕ್ಲಬ್ ಮತ್ತು ಐಕ್ಯುಎಸಿ ಹಾಗೂ ಎನ್ಎಸ್‌ಎಸ್ ಸಹಯೋಗದೊಂದಿಗೆ ಏಡ್ಸ್ ಮತ್ತು ಎಚ್ಐವಿ ಕುರಿತು ಯುವಜನರಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಎಂ.ಎನ್. ಸೌಮ್ಯಶ್ರೀ ಮಾತನಾಡಿ, ವಿದ್ಯಾರ್ಥಿಗಳು ಏಡ್ಸ್ ಮತ್ತು ಎಚ್ಐವಿಯಂತಹ ಮಾರಣಾಂತಿಕ ರೋಗದ ಬಗ್ಗೆ ಅರಿವನ್ನು ಹೊಂದಿರಬೇಕು. ನಿಮ್ಮ ಸುತ್ತಮುತ್ತಲಿನ ಜನರಿಗೆ ಜಾಗೃತಿಯನ್ನು ಮೂಡಿಸಬೇಕು. ಯಾವ ಮೂಲಗಳ ಪ್ರಕಾರ ಈ ರೋಗ ಬರುವ ಸಾಧ್ಯತೆ ಇದೆ ಎಂಬುದನ್ನು ವಿವರಿಸುವಂತೆ ತಿಳಿಸಿದರು.ಉಪನ್ಯಾಸಕ ಮಹೇಶ್ ಬಾಬು ಮಾತನಾಡಿ, ಸ್ನೇಹ- ಸಂಬಂಧಗಳ ಹೆಸರಿನಲ್ಲಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು. ಓದುವ ವಯಸ್ಸಿನಲ್ಲಿ ಓದುವ ಕಡೆ ನಿಮ್ಮ ಗಮನವಿರಬೇಕು. ಈ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಗೆ ಹೆಚ್ಚು ಬೇಡಿಕೆ ಇದೆ. ಹಾಗಾಗಿ ತಾವೆಲ್ಲರೂ ಆಂಗ್ಲ ಭಾಷೆಯ ನೈಪುಣ್ಯತೆಯನ್ನು ಹೊಂದಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಆಲಂಗೂರ್ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಶಕ್ತಿ ದೇಶದ ಶಕ್ತಿಯಾಗಿ , ಭವಿಷ್ಯದ ಸಂಪತ್ತು ಆಗಬೇಕು. ನೀವು ಉತ್ತಮವಾಗಿ ಮತ್ತೊಬ್ಬರನ್ನು ಉತ್ತಮರನ್ನಾಗಿ ಮಾಡುವ ಮಾನವೀಯತೆಯನ್ನು ಬೆಳೆಸಿಕೊಳ್ಳುವಂತೆ ಹೇಳಿದರು.ಉಪನ್ಯಾಸಕರಾದ ಡಿ.ಕೆ.ಶಿವರಾಮ್, ಸಮಾಜ ಶಾಸ್ತ್ರದ ಸುಧಬಿದರಿ, ವಾಣಿಜ್ಯ ವಿಭಾಗದ ತಾರಾಲಕ್ಷ್ಮೀ, ವಾಣಿಜ್ಯ ವಿಭಾಗದ ಗುರುಪ್ರಸಾದ್ , ಕುಮಾರಸ್ವಾಮಿ, ಮೂರ್ತಿ, ರವಿ, ಉಮೇಶ್ ,ಅನುಸೂಯ, ಶಿವಮ್ಮ ಇತರರಿದ್ದರು.